
ನವದೆಹಲಿ / ಪುಣೆ, ಡಿಸೆಂಬರ್.08 : ದೆಹಲಿಯ ಹೊರವಲಯದಲ್ಲಿ ಕೇಂದ್ರೀಕೃತವಾಗಿರುವ ರೈತರ ಆಂದೋಲನ ವನ್ನು ಬೆಂಬಲಿಸಲು ದೇಶಾದ್ಯಂತ ರೈತರು ಬೀದಿಗಿಳಿಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಗುಡುಗಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೆಂಬಲ ವ್ಯಕ್ತಪಡಿಸಿದ್ದು, ಮಂಗಳವಾರ ದಿನವಿಡೀ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಳೆಗಾಂವ್ ಸಿದ್ದಿ ಗ್ರಾಮದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ, ‘ಕೃಷಿಕರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಈ ಆಂದೋಲನ ದೇಶವ್ಯಾಪಿ ನಡೆಯಬೇಕು’ ಎಂದು ಹೇಳಿದ್ದಾರೆ.
ಇಂತಹ ಆಂದೋಲನಗಳು ಮತ್ತೆ ಮತ್ತೆ ಸಂಭವಿಸಬಾರದು” ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು ಇದು ಸರಿಯಾದ ಸಮಯವಾಗಿದೆ ಎಂದು ಹಜಾರೆ ಹೇಳಿದ್ದಾರೆ. ರೈತರ ಸಮಸ್ಯೆಗಳ ಕುರಿತು ಪ್ರಧಾನಿ ಮತ್ತು ಕೃಷಿ ಸಚಿವರು ನೀಡಿದ ಭರವಸೆಗಳು ಈವರೆಗೆ ಈಡೇರಿಲ್ಲ. ರೈತರು ಬೀದಿಗಳಿದು ಹೋರಾಟ ನಡೆಸಿ ಆಂದೋಲನ ವನ್ನು ಬೆಂಬಲಿಸಬೇಕು ಎಂದಿದ್ದಾರೆ.
ಕೃಷಿ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಲು ಅವರ ಬೆಳೆಗಳಿಗೆ ಎಂಎಸ್‌ಪಿ ನೀಡುವ ಅವಶ್ಯಕತೆಯಿದೆ ಎಂದು ಅಣ್ಣಾ ಹಜಾರೆ ಹೇಳಿದರು. ಇದಕ್ಕಾಗಿ ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ಸ್ವಾಯತ್ತ ಸ್ಥಾನಮಾನ ನೀಡಬೇಕು. ಈ ಬೇಡಿಕೆಗಾಗಿ ನಾವು ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದೆವು ಎಂದರು.
ಸರ್ಕಾರರಗಳು ಭರವಸೆಗಳನ್ನು ಮಾತ್ರ ನೀಡಿದವು. ಆದರೆ ರೈತರ ಬೇಡಿಕೆಗಳನ್ನು ಎಂದಿಗೂ ಈಡೇರಿಸಲಿಲ್ಲ ಎಂದು ಆರೋಪಿಸಿದ ಹಜಾರೆಯವರು, ‘ದೆಹಲಿಯಲ್ಲಿ ನಡೆಯುತ್ತಿರುವ ಈ ಆಂದೋಲನವು ದೇಶಾದ್ಯಂತ ವಿಸ್ತರಿಸಬೇಕೆಂದು ದೇಶದ ಜನರಲ್ಲಿ ನಾನು ಮನವಿ ಮಾಡುತ್ತಿದ್ದೇನೆ’ ಎಂದರು.
‘ರೈತರ ಹಿತಾಸಕ್ತಿಗಾಗಿ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತಹ ವಾತಾವರಣವನ್ನು ಈ ಆಂದೋಲನ ಸೃಷ್ಟಿಸಬೇಕು. ಆದರೆ, ಯಾರೂ ಹಿಂಸಾಚಾರಕ್ಕೆ ಮುಂದಾಗಬಾರದು’ ಎಂದು ಅವರು ಮನವಿ ಮಾಡಿದರು.
ಕೇಂದ್ರ ಕೃಷಿ ಮೌಲ್ಯ ಆಯೋಗದ ಸ್ವಾಯತ್ತತೆ ಮತ್ತು ಸ್ವಾಮಿನಾಥ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಆದಾಗ್ಯೂ, ಇದನ್ನು ಇಲ್ಲಿಯವರೆಗೆ ನಿರ್ಲಕ್ಷಿಸಲಾಗಿದೆ. ಈಗ ನಾವು ಮತ್ತೊಮ್ಮೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.
2011 ಮತ್ತು 2012 ರ ನಡುವೆ ಭ್ರಷ್ಟಾಚಾರದ ವಿರುದ್ಧ ಆಂದೋಲನವನ್ನು ಅಣ್ಣಾ ಹಜಾರೆ ಮುನ್ನಡೆಸಿದರು, ಇದು ಅಂದಿನ ಯುಪಿಎ ಸರ್ಕಾರವು ಚುನಾವಣೆಯಲ್ಲಿ ಸೋಲುವಂತೆ ಮಾಡಿತು.
Comments are closed.