
ಹೈದರಾಬಾದ್; ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅನೇಕರಿಗೆ ಆಘಾತ ನೀಡಿದೆ. ಅಲ್ಲದೆ, ಈ ಚುನಾವಣಾ ಫಲಿತಾಂಶದಿಂದ ಉತ್ತೇಜನಗೊಂಡಿರುವ ಅಸಾದುದ್ದೀನ್ ಓವೈಸಿ ತಮ್ಮ AIMIM ಪಕ್ಷ ಮುಂಬರುವ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಬಿಹಾರದ ಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ AIMIM ಪಕ್ಷ ಖಾತೆ ತೆರೆದಿದೆ. ಈ ಕುರಿತು ಮಾತನಾಡಿರುವ ಓವೈಸಿ, “ಬಿಹಾರದ ಪೂರ್ವ ಸೀಮಾಂಚಲ್ ಭಾಗದ ಮತದಾರರು ನಮ್ಮ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ನಮ್ಮ ಪಕ್ಷ ಆ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಡಲಿದೆ. ಅಲ್ಲದೆ, ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷ ಪಶ್ಚಿಮ ಬಂಗಾಳ, ಉತ್ತರಪ್ರದೇಶದಲ್ಲೂ ಸ್ಪರ್ಧಿಸಲಿದೆ. ನಾನು ದೇಶದ ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ. ಇದಕ್ಕಾಗಿ ನಾನು ಯಾರದ್ದಾದರೂ ಅನುಮತಿ ಪಡೆಯಬೇಕೆ?” ಎಂದು ಪ್ರಶ್ನಿಸಿದ್ದಾರೆ.
AIMIM ಪಕ್ಷ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತಿದೆ ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಪ್ರಸ್ತುತ ದೇಶದಾದ್ಯಂತ ಕೇಳಿ ಬರುತ್ತಿದೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಒವೈಸಿ, “ನಾವು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುತ್ತಿದ್ದೇನೆ. ಆದ್ದರಿಂದ ಸ್ವಂತವಾಗಿ ಸ್ಪರ್ಧಿಸುವ ಹಕ್ಕನ್ನು ಹೊಂದಿದ್ದೇವೆ.
ನಮ್ಮನ್ನು ಪ್ರಶ್ನೆ ಮಾಡುತ್ತಿರುವವರು ಮಹಾರಾಷ್ಟ್ರದಲ್ಲಿ ಶಿವಸೇನಾ ಮಡಿಲಲ್ಲಿ ಕುಳಿತುಕೊಂಡು ಅಧಿಕಾರ ನಡೆಸಬಹುದು. ಆದರೆ, ನಾವು ಚುನಾವಣೆಗೆ ಸ್ಪರ್ಧಿಸಬಾರದೆ ?, ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಯಾರ ಅನುಮತಿಯನ್ನಾದರೂ ಕೇಳಬೇಕೇ ?” ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಇತರೆ ಪಕ್ಷಗಳ ಜೊತೆಗೆ ಮೈತ್ರಿ ಸಾಧಿಸುವ ಕುರಿತು ಮಾತನಾಡಿರುವ ಓವೈಸಿ, “ಮುಂದಿನ ಎಲ್ಲಾ ಚುನಾವಣೆಗಳಲ್ಲೂ ನಮ್ಮ ಪಕ್ಷ ಸ್ವಂತ ಸಾಮರ್ಥ್ಯದ ಮೇಲೆ ಸ್ಪರ್ಧೆ ನಡೆಸಲಿದೆ. ಅಕಸ್ಮಾತ್ ಮೈತ್ರಿ ತೀರಾ ಅಗತ್ಯ ಎಂದು ತಿಳಿದುಬಂದರೆ ಆ ಸಂದರ್ಭದಲ್ಲಿ ಮೈತ್ರಿಯ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
Comments are closed.