ರಾಷ್ಟ್ರೀಯ

ಪತ್ನಿ ಮತ್ತು ಮುದ್ದಾದ ಇಬ್ಬರು ಮಕ್ಕಳನ್ನು ಕೊಂದು ಉದ್ಯಮಿ ಆತ್ಮಹತ್ಯೆ

Pinterest LinkedIn Tumblr


ಚಂಡೀಗಢ: ಉದ್ಯಮಿಯೋರ್ವ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್ ರಾಜ್ಯದ ಬಟಿಂಡಾದಲ್ಲಿ ನಡೆದಿದೆ.

ಉದ್ಯಮಿ ಮನೆಯಲ್ಲಿ ಪೊಲೀಸರಿಗೆ ಡೆತ್ ನೋಟ್ ಲಭ್ಯವಾಗಿದೆ. ಉದ್ಯಮಿ ದೇವಿಂದರ್ ಗರ್ಗ್ (41), ಪತ್ನಿ ಮೀನಾ (38), ಪುತ್ರ ಆರೂಷ್ (14) ಮತ್ತು ಪುತ್ರಿ ಮುಸ್ಕಾನ್ (10) ಮೃತರು. ಆರ್ಥಿಕ ಸಂಕಷ್ಟ ಹಿನ್ನೆಲೆ ಈ ನಿರ್ಧಾರಕ್ಕೆ ಬಂದಿರೋದಾಗಿ ದೇವಿಂದರ್ ಡೆತ್ ನೋಟ್ ನಲ್ಲಿ ಬರೆದಿದ್ದು, ಪತ್ರದಲ್ಲಿ ಸಾಲ ಪಡೆದ 9 ಜನರ ಹೆಸರುಗಳಿವೆ.

ದೇವಿಂದರ್ ಬಟಿಂಡಾ ಗ್ರೀನ್ ಸಿಟಿ ಕಾಲೋನಿ ಕೋಟಿ ನಂಬರ್ 284ರಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಖಾಸಗಿ ಕಂಪನಿ ಮೂಲಕ ವ್ಯವಹಾರ ನಡೆಸುತ್ತಿದ್ದ ದೇವಿಂದರ್ ಲಾಕ್‍ಡೌನ್ ಹೊಡೆತದಿಂದ ಚೇತರಿಸಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿದ್ದರಿಂದ ದೇವಿಂದರ್ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಸಾಲದ ಒತ್ತಡದಲ್ಲಿದ್ದ ದೇವಿಂದರ್ ಇಂದು ಮಧ್ಯಾಹ್ನ ಸುಮಾರು 4 ಗಂಟೆಗೆ ತಮ್ಮ ಬಳಿಯಲ್ಲಿದ್ದ ಲೈಸನ್ಸ್ ಗನ್ ನಿಂದ ಮಕ್ಕಳು ಮತ್ತು ಪತ್ನಿಗೆ ಶೂಟ್ ಮಾಡಿದ್ದಾರೆ. ನಂತರ ಅದೇ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್‍ಎಸ್‍ಪಿ ಭೂಪಿಂದರ್ ಸಿಂಗ್ ತಮ್ಮ ತಂಡದೊಂದಿಗೆ ತೆರಳಿದ್ದಾರೆ. ನಾಲ್ಕು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಟಿ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದು, ಮನೆಯಲ್ಲಿ ಸಿಕ್ಕ ಡೆತ್ ನೋಟ್, ಗನ್ ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತ ದೇವಿಂದರ್ ಬಿಟ್‍ಕಾಯಿನ್ ಕಂಪನಿಯ ವ್ಯವಹಾರಗಳನ್ನ ಮಾಡುತ್ತಿದ್ದರು. ಕಂಪನಿಯಲ್ಲಿ ಸುಮಾರು 15 ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿದ್ದರು. ಆದ್ರೆ ಸಾಲ ಮರುಪಾವತಿಸುವಲ್ಲಿ ಅಸಮರ್ಥರಾಗಿದ್ದರು. ಡೆತ್ ನೋಟ್ ನಲ್ಲಿ ತಮಗೆ ಸಾಲ ನೀಡಿದ 9 ಜನರ ಹೆಸರು ಬರೆದಿದ್ದು, ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂದು ದೇವಿಂದರ್ ಪತ್ರದಲ್ಲಿ ಬರೆದಿದ್ದಾರೆ ಎಂದು ಭೂಪಿಂದರ್ ಸಿಂಗ್ ಹೇಳಿದ್ದಾರೆ.

Comments are closed.