ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿ ಭೂಗತಲೋಕದ ಬನ್ನಂಜೆ ರಾಜ ಹಾಗೂ ರವಿ ಪೂಜಾರಿ ಆಪ್ತನ ಮೇಲೆ ಶೂಟೌಟ್ ನಡೆದಿದೆ. ಅಕ್ಟೋಬರ್ 15 ಗುರುವಾರದಂದು ರಾತ್ರಿ 9 ಗಂಟೆಗೆ ದುಷ್ಕರ್ಮಿಗಳ ಗುಂಡಿಗೆ ಬಾರ್ ಮಾಲೀಕ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದವನಾದ ಮನೀಶ್ ಶೆಟ್ಟಿ ಬಲಿಯಾಗಿದ್ದು 45 ವರ್ಷ ವಯಸ್ಸಿನ ಮೃತ ಮನೀಶ್ ಶೆಟ್ಟಿ, ಡ್ಯುಯೆಟ್ ಬಾರ್ನ (ಲೇಡಿಸ್ ಬಾರ್) ಮಾಲೀಕನಾಗಿದ್ದ.

ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಎಚ್ಪಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬ್ರಿಗೇಡ್ ರಸ್ತೆ ಸಮೀಪದಲ್ಲೇ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಮನೀಶ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಮನೀಶ್, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಭೂಗತ ಜಗತ್ತಿನ ನಂಟು ಹೊಂದಿದ್ದ ಮನೀಶ್ ಶೆಟ್ಟಿ ಮೇಲೆ ಮಂಗಳೂರು ಹಾಗೂ ಮುಂಬೈನಲ್ಲೂ ಹಲವು ಪ್ರಕರಣಗಳಿವೆ. ಅಲ್ಲದೇ ಬಾಣಸವಾಡಿಯ ಚೆಮ್ಮನೂರು ಜುವೆಲ್ಲರಿ ರಾಬರಿ (ದರೋಡೆ) ಪ್ರಕರಣದಲ್ಲೂ ಮನೀಶ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.
ಮನೀಶ್ ಶೆಟ್ಟಿ ಮೇಲೆ ಗುಂಡು ಹಾರಿಸಲು ದುಷ್ಕರ್ಮಿಗಳು ಡಬಲ್ ಬ್ಯಾರಲ್ ಗನ್ ಬಳಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುರಿತು ಈಗಾಗಲೇ ಸುಳಿವು ಸಿಕ್ಕಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದಿದ್ದಾರೆ. ಘಟನಾ ಸ್ಥಳಕ್ಕೆ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೀಶ್ ಶೆಟ್ಟಿ ಹತ್ಯೆಗೆ ಅಂಡರ್ ವರ್ಲ್ಡ್ ಲಿಂಕ್ ಆಗುತ್ತಿದ್ದು ಡಾನ್ ವಿಕ್ಕಿ ಶೆಟ್ಟಿ ಹೆಸರು ಕೂಡ ಕೇಳೀಬರುತ್ತಿದೆ.
Comments are closed.