
ರಾಯಚೂರು: ರಾಜ್ಯದ ಜನರು ಕುಡಿಯುವ ನೀರಿನಲ್ಲಿ ಅಧಿಕ ಪ್ರಮಾಣದ ಯುರೇನಿಯಂ ಎಂಬ ವಿಷವಿದ್ದು, ಈ ನೀರನ್ನು ಕುಡಿಯುವುದರಿಂದ ಕಿಡ್ನಿ, ಕ್ಯಾನ್ಸರ್, ಥೈರಾಡ್, ಮೂಳೆರೋಗ ಸೇರಿದಂತೆ ವಿವಿಧ ಕಾಯಿಲೆಗಳು ಬರುತ್ತಿವೆ. ಕೇಂದ್ರದ ಭೂ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ಈ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ 201 ಎಂಜಿ/ಲೀಟರ್ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಕೇವಲ ಸ್ಯಾಂಪಲ್ ಮಾತ್ರ. ರಾಜ್ಯದಲ್ಲಿ ವ್ಯಾಪಕವಾಗಿ ಯುರೇನಿಯಂಯುಕ್ತ ನೀರು ಇರುವ ಸಾಧ್ಯತೆ ಇದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿಗಳ ಅಭಿವೃದ್ದಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು ದೇಶದ 18 ರಾಜ್ಯಗಳಲ್ಲಿ 151 ಜಿಲ್ಲೆಗಳಲ್ಲಿ ಯುರೇನಿಯಂ ಅಂಶ ಅಧಿಕವಿರುವ ಬಗ್ಗೆ ಸಮೀಕ್ಷೆ ನಡೆಸಿದ್ದು, ತೆರೆದ ಬಾವಿ, ಕೊಳವೆ, ಕೈಪಂಪು ಸೇರಿದಂತೆ ಜಲಮೂಲಗಳಲ್ಲಿ ಒಟ್ಟು 1500 ಕಡೆ ನೀರಿನ ಮಾದರಿ ಸಂಗ್ರಹಿಸಿದೆ. ಇವುಗಳಲ್ಲಿ ಯುರೇನಿಯಂ ನಿಗಿದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದು ಕಂಡು ಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿ ಕುಡಿವ ನೀರಿನಲ್ಲಿ ಪ್ರತಿ ಲೀಟರ್ಗೆ ಗರಿಷ್ಠ 30 ಮೈಕ್ರೋ ಗ್ರಾಂ ಇದ್ದರೆ ಕುಡಿಯಲು ಯೋಗ್ಯವೆಂದು ಹೇಳಿದೆ. ಆದರೆ ಇಲ್ಲಿ ಈ ಪ್ರಮಾಣ ಅಧಿಕವಾಗಿರುವುದು ಕಂಡು ಬಂದಿದೆ. ರಾಜ್ಯದ 8 ಜಿಲ್ಲೆಯಲ್ಲಿ 14 ಕಡೆ ಪರೀಕ್ಷೆ ಮಾಡಿದಾಗ ಪ್ರತಿ ಲೀಟರ್ ನೀರಿನಲ್ಲಿ 30 ಮೈಕ್ರೋ ಗ್ರಾಂಗಿಂತ ಅಧಿಕ ಯುರೇನಿಯಂ ಇರುವ ಅಂಶ ಕಂಡು ಬಂದಿದೆ.
ಇವುಗಳ ಪಟ್ಟಿ ನೋಡುವುದಾದರೆ ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ 201.01 ಮೈಕ್ರೋ ಗ್ರಾಂ, ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಯೋಗಿ ಕಲ್ಲು ಎಂಬಲ್ಲಿ 150.64 ಮೈಕ್ರೋ ಗ್ರಾಂ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ 145.77 ಮೈಕ್ರೋ ಗ್ರಾಂ, ದೇವನಹಳ್ಳಿ ತಾಲೂಕಿನ ಆವಟಿ ಗ್ರಾಮದಲ್ಲಿ 111.84 ಮೈಕ್ರೋ ಗ್ರಾಂ, ಬೆಂಗಳೂರು ನಗರ ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ 104.02 ಮೈಕ್ರೋ ಗ್ರಾಂ, ಕೋಲಾರದ ಆನಗೊಂಡನಹಳ್ಳಿಯಲ್ಲಿ 73.57 ,ಮೈಕ್ರೋಗ್ರಾಂ, ಹೋಸಪೇಟೆ ತಾಲೂಕಿನ ವೆಂಕಟಾಪುರದಲ್ಲಿ 54.73 ಮೈಕ್ರೋಗ್ರಾಂ, ಲಿಂಗಸಗೂರು ತಾಲೂಕಿನ ಬೊಮ್ಮನಹಳ್ಳಿಯಲ್ಲಿ 54.63 ಮೈಕ್ರೋ ಗ್ರಾಂ, ಮಂಡ್ಯ ಜಿಲ್ಲೆಯ ತಿರುಮಲಸಗರದಲ್ಲಿ 40.38 ಮೈಕ್ರೋ ಗ್ರಾಂ, ರಾಯಚೂರು ಜಿಲ್ಲೆಯ ಹಂಚಿನಾಳ ಕ್ಯಾಂಪಿನಲ್ಲಿ 35.66 ಮೈಕ್ರೋ ಗ್ರಾಂ, ಹಾಗು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ 34.21 ಮೈಕ್ರೋ ಗ್ರಾಂ ಯುರಿನಿಯಂ ಇರುವ ಅಂಶ ವರದಿಯಲ್ಲಿದೆ.
ಅಧಿಕ ಯುರೇನಿಯಂ ಅಂಶವಿರುವುದರಿಂದ ಕಿಡ್ನಿ ಸಮಸ್ಯೆ, ಹೃದಯಸಂಬಂಧಿ ಕಾಯಿಲೆ, ಚರ್ಮ, ಮೂಳೆ, ಥೈರಾಯ್ಡ್ ಸೇರಿದಂತೆ ಹಲವಾರು ಸಮಸ್ಯೆಗಳಾಗುತ್ತಿವೆ. ಬೆಳೆಗಾಗಿ ಅಧಿಕ ರಸಾಯನಿಕ ಬಳಕೆ, ಅಂತರ್ಜಲ ಮಟ್ಟ ಕುಸಿತದಿಂದಾಗಿ ಅಂತರ್ಜಲದಲ್ಲಿ ಯುರೇನಿಯಂ ಅಂಶ ಅಧಿಕವಾಗಿದೆ. ಇದರಿಂದ ಜನರು ಜಾಗೃತರಾಗಿ, ಶುದ್ಧೀಕರಿಸಿದ ಕುಡಿವ ನೀರನ್ನ ಬಳಕೆ ಮಾಡಬೇಕು. ಸರಕಾರ ಸಹ ಶುದ್ದ ಕುಡಿವ ನೀರಿನ ವ್ಯವಸ್ಥೆಯನ್ನು ಎಲ್ಲಾ ಕಡೆಯೂ ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವರು ಸಹ ಹೇಳಿದ್ದಾರೆ.
Comments are closed.