
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್’ ಚಿತ್ರಮಂದಿರದಲ್ಲಿಯೂ ತೆರೆಕಾಣಲಿದೆ. ‘ಅರೇ, ಭಾರತದಲ್ಲಿ ಚಿತ್ರಮಂದಿರಗಳೇ ಓಪನ್ ಆಗಿಲ್ಲ. ಈ ಸಿನಿಮಾ ಹೇಗೆ ತೆರೆಕಾಣಲಿದೆ’?
ಈ ಹಿಂದೆಯೇ ಡಿಸ್ನೀ ಹಾಟ್ ಸ್ಟಾರ್ ಓಟಿಟಿ ವೇದಿಕೆಯಲ್ಲಿ ‘ಲಕ್ಷ್ಮಿ ಬಾಂಬ್’ ರಿಲೀಸ್ ಆಗಲಿದೆ ಎಂಬ ಮಾಹಿತಿ ಅಧಿಕೃತವಾಗಿತ್ತು. ಆ ಮಾತಿನಂತೆಯೇ, ನ.9ರಂದು ಸಿನಿಮಾ ರಿಲೀಸ್ ಆಗುವುದು ಕೂಡ ನಿಶ್ಚಿತವೇ. ಆದರೆ, ಒಂದು ಸಣ್ಣ ಬದಲಾವಣೆ ಆಗಿದೆ. ಅದೇನೆಂದರೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ ರಾಷ್ಟ್ರಗಳಲ್ಲಿ ಚಿತ್ರಮಂದಿರಗಳು ಓಪನ್ ಆಗಿವೆ. ಅಲ್ಲೆಲ್ಲ ಸಿನಿಮಾ ಪ್ರದರ್ಶನ ಶುರುವಾಗಿದೆ. ಹಾಗಾಗಿ, ಆ ರಾಷ್ಟ್ರಗಳಲ್ಲಿ ‘ಲಕ್ಷ್ಮಿ ಬಾಂಬ್’ ಸಿನಿಮಾ ನೇರವಾಗಿ ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದೆ.
ಚಿತ್ರಮಂದಿರಗಳು ಆರಂಭಗೊಂಡಿರುವ ದೇಶಗಳನ್ನು ಬಿಟ್ಟು, ಭಾರತ, ಅಮೆರಿಕ, ಕೆನಡ, ಯುಕೆ ಮುಂತಾದ ಕಡೆಗಳಲ್ಲಿ ನ.9ರಂದು ಓಟಿಟಿಯಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಹಾಗಾಗಿ, ‘ಲಕ್ಷ್ಮಿ ಬಾಂಬ್’ ಚಿತ್ರವನ್ನು ಭಾರತೀಯರು ಮನೆಯಲ್ಲೇ ಕಣ್ತುಂಬಿಕೊಳ್ಳಬಹುದು. ನೇರವಾಗಿ ಓಟಿಟಿ ಹಾಗೂ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿರುವ ಅಕ್ಷಯ್ ನಟನೆಯ ಮೊದಲ ಸಿನಿಮಾ ಇದಾಗಿದೆ.
ವಿಶೇಷವೆಂದರೆ, ಈ ಸಿನಿಮಾವನ್ನು ಬರೋಬ್ಬರಿ 125 ಕೋಟಿ ರೂ. ನೀಡಿ ಓಟಿಟಿಗೆ ಮಾರಾಟ ಮಾಡಲಾಗಿದೆಯಂತೆ! ಇಷ್ಟೊಂದು ದೊಡ್ಡ ಮೊತ್ತಕ್ಕೆ ಬಿಕರಿಯಾದ ಮೊದಲ ಹಿಂದಿ ಚಿತ್ರವಿದು ಎನ್ನಲಾಗಿದೆ. ತಮಿಳಿನಲ್ಲಿ ಕೆಲ ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿದ್ದ ‘ಕಾಂಚನ’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ರಾಘವ ಲಾರೆನ್ಸ್, ಹಿಂದಿಯಲ್ಲೂ ನಿರ್ದೇಶನ ಮಾಡಿದ್ದಾರೆ. ಅಕ್ಷಯ್‌ಗೆ ನಾಯಕಿಯಾಗಿ
ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೇಲೆ ಅಕ್ಕಿ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜೂನ್-ಜುಲೈನಲ್ಲೇ ಈ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಬೇಕಿತ್ತು.
Comments are closed.