ಕರ್ನಾಟಕ

ಭೂ ಸುಧಾರಣೆ ಕಾಯಿದೆ ವಿರೋಧಿಸಿ ಸೆ. 25ರಂದು ಭಾರತ ಬಂದ್‌ಗೆ ಕರೆ

Pinterest LinkedIn Tumblr


ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣೆ ಕಾಯಿದೆ ವಿರೋಧಿಸಿ 30ಕ್ಕೂ ಅಧಿಕ ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರದಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಿವೆ.

ಇದಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಸಾವಿರಾರು ರೈತರು ಹಾಗೂ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ಘೋಷಣೆ ಕೂಗುತ್ತಾ ಆನಂದರಾವ್‌ ವೃತ್ತದ ಬಳಿಯಿರುವ ಮೇಲ್ಸೇತುವೆ ಮಾರ್ಗವಾಗಿ ಫ್ರೀಡಂಪಾರ್ಕ್‌ನಲ್ಲಿ ಸಮಾವೇಶಗೊಂಡರು.

ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತಪರ ಕಾನೂನುಗಳು ಎಂದುಕೊಂಡೇ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಅದನ್ನು ಚಾಚೂ ತಪ್ಪದೆ ಕರ್ನಾಟಕ ಸರಕಾರ ಜಾರಿಗೊಳಿಸುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ,” ಎಂದು ಕಿಡಿ ಕಾರಿದರು.

“ಭೂ ಸುಧಾರಣೆ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ, ವಿದ್ಯುಚ್ಛಕ್ತಿ ಖಾಸಗೀಕರಣ ಕಾಯಿದೆಗಳು ರೈತ ವಿರೋಧಿಯಾಗಿವೆ. ಕೇಂದ್ರ ಸರಕಾರ ಒಪ್ಪಂದ ಕೃಷಿ ಜಾರಿಗೆ ತಂದಿದೆ. ಇದು ಸಣ್ಣ-ಪುಟ್ಟ ಒಪ್ಪಂದವಲ್ಲ. ಪುಟಗಟ್ಟಲೆ ದಾಖಲೆಗಳಿಗೆ ರೈತರು ಸಹಿ ಹಾಕಬೇಕಿದೆ. ಇದರಲ್ಲಿ ರೈತರಿಗೆ ಈಗಾಗಲೇ ಸಾಕಷ್ಟು ಮೋಸವಾಗಿದೆ. ಇದುವೇ ಕೇಂದ್ರ ಸರಕಾರ ರೈತರಿಗೆ ನೀಡಿದ ಉಡುಗೊರೆ. ಎಪಿಎಂಸಿಯನ್ನು ರಾಜ್ಯ ಸರಕಾರದ ವ್ಯಾಪ್ತಿಯಿಂದ ಕಿತ್ತು ಕೇಂದ್ರ ಸರಕಾರದ ವ್ಯಾಪ್ತಿಗೆ ತಂದು ಅದನ್ನು ಖಾಸಗಿಯವರಿಗೆ ಕೊಡಲು ಮುಂದಾಗಿದೆ. ಇಲ್ಲಿಯವರೆಗೆ ಯಾವ ಸರಕಾರವೂ ರೈತರಿಗೆ ಸರಿಯಾಗಿ ನ್ಯಾಯ ಒದಗಿಸಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

“ನರೇಂದ್ರ ಮೋದಿ ಅವರಿಗೆ ರೈತರಿಗೆ ಒಳ್ಳೆಯದು ಮಾಡುವ ಮನೋಭಾವವಿದ್ದರೆ, ಬೆಂಬಲ ಬೆಲೆಗೆ ಕಾನೂನು ರೂಪ ನೀಡಿ ಜಾರಿಗೊಳಿಸಿ. ಇದರಿಂದ ರೈತರಿಗೆ ಅನ್ಯಾಯವಾಗುವುದಿಲ್ಲ. ಒಂದು ವೇಳೆ ಅನ್ಯಾಯವಾದರೂ ಕಾನೂನು ಮೂಲಕ ಎದುರಿಸಬಹುದು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೊಳಿಸಲು ಹೊರಟಿರುವ ಜನ ವಿರೋಧಿ ನೀತಿಗಳನ್ನು ಹಿಂಪಡೆಯದಿದ್ದರೆ, ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಸೆ.25ರಂದು ಭಾರತ ಬಂದ್‌ಗೆ ಕರೆ ಕೊಡಲಿದೆ,” ಎಂದು ಘೋಷಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮಾತನಾಡಿ, “ಸರಕಾರ ರೈತರ ಹೋರಾಟ ನಿರ್ಲಕ್ಷಿಸಿದರೆ ಮುಂದೆ ಅಸಹಕಾರ ಚಳವಳಿ ಮಾಡಬೇಕಾಗುತ್ತದೆ,” ಎಂದು ಎಚ್ಚರಿಸಿದರು.

Comments are closed.