
ಮಂಗಳೂರು : ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲು ರಕ್ತದ ಕೊರತೆ ಇರುವುದನ್ನು ಮನಗಂಡು ಪ್ರಧಾನಿ ಮೋದಿಜಿಯವರ ಜನ್ಮದಿನದಂದು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣಗೊಳಿಸಿರುವುದು ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಹೇಳಿದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು ತಮ್ಮ ಬದುಕಿನ 70 ನೇ ವಸಂತಕ್ಕೆ ಕಾಲಿರಿಸಲಿದ್ದು, ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಮಂಗಳೂರಿನ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ ನಗರದ ಕೊಡಿಯಾಲ್ ಬೈಲ್ನ ಟಿ.ವಿ.ರಮಣ ಪೈ ಸಭಾಂಗಣದ ಆವರಣದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಬಡವರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಕಾಮಾತ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾ ಹಾರೈಸಿದರು. ಸೇವಾ ಭಾರತಿಯ (ಚೇತನಾ ವಿಶೇಷ ಶಾಲೆ) ಟ್ರಸ್ಟಿ ವಿನೋದ್ ಶೈಣೈ, ನಾಗರೀಕ ಹಿತಾರಕ್ಷಣಾ ವೇದಿಕೆಯ ಅಧ್ಯಕ್ಷ ಹನುಮಂತ ಕಾಮಾತ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಟ್ರಸ್ಟ್ನ ಸ್ವಯಂ ಸೇವಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೊದಲ 70 ರಕ್ತದಾನಿಗಳಿಗೆ ಉಚಿತ ಆಯುಷ್ ಕ್ವಾಥ್ ಚೂರ್ಣ ಹಾಗೂ ಕಿಟ್ ವಿತರಣೆ :
ಶಿಬಿರದಲ್ಲಿ ರಕ್ತದಾನ ಮಾಡಲು ಬಂದ ಮೊದಲ 70 ರಕ್ತದಾನಿಗಳಿಗೆ ಮೋದಿಜಿಯವರ ಆಕರ್ಷಕ ಚಿತ್ರವಿರುವ ಉತ್ತಮ ಗುಣಮಟ್ಟದ ಟೀ ಶರ್ಟ್, ಮಾಸ್ಕ್, ರಿಸ್ಟ್ ಬ್ಯಾಂಡ್, ಮಗ್ಗ್ ಮತ್ತು ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಒಂದು ತಿಂಗಳಿಗಾಗುವಷ್ಟು ಆಯುಷ್ ಕ್ವಾಥ್ ಚೂರ್ಣವನ್ನು ಉಚಿತವಾಗಿ ನೀಡಲಾಯಿತು.

ಈಗಾಗಲೇ ಲಾಕ್ ಡೌನ್ ಅವಧಿಯಲ್ಲಿ ಅನೇಕ ಮಾನವೀಯ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಕರ್ತರು ಕೊರೊನಾ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ನಾವೆಲ್ಲರೂ ಹೋರಾಟ ಮಾಡುತ್ತಿರುವ ಈ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಕೂಡ ಕಂಡುಬರುತ್ತಿರುವುದನ್ನು ಮನಗಂಡು ಟ್ರಸ್ಟ್ ನ ಪ್ರಮುಖರು ಚರ್ಚಿಸಿ ಮೋದಿಜಿಯವರ ಜನ್ಮದಿನದಂದು ರಕ್ತದಾನ ಶಿಬಿರ ಏರ್ಪಡಿಸುವ ಬಗ್ಗೆ ನಿರ್ಧರಿಸಲಾಯಿತು ಎಂದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥ ಮಂಗಲ್ಪಾಡಿ ನರೇಶ್ ಶೆಣೈ ತಿಳಿಸಿದರು.
ಅದೇ ರೀತಿ ಈ ರಕ್ತದಾನ ಶಿಬಿರದಲ್ಲಿ ಸಹೃದಯಿಗಳು ಭಾಗವಹಿಸಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಉತ್ತಮ ಕಾರ್ಯದೊಂದಿಗೆ ಕೈ ಜೋಡಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಅರ್ಪಿಸುವುದಾಗಿ ಅವರು ತಿಳಿಸಿದ್ದಾರೆ.
Comments are closed.