ಕ್ರೀಡೆ

ಶ್ರೀಶಾಂತ್‌ರ ಸ್ಪಾಟ್‌ ಫಿಕ್ಸಿಂಗ್‌ ಆರೋಪ: 7 ವರ್ಷ ನಿಷೇಧದ ಅವಧಿ ಮುಕ್ತಾಯ

Pinterest LinkedIn Tumblr


ಹೊಸದಿಲ್ಲಿ : 2013ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ 7 ವರ್ಷಗಳ ನಿಷೇಧಕ್ಕೊಳಗಾಗಿದ್ದ ಎಸ್‌. ಶ್ರೀಶಾಂತ್‌ ಅವರ ನಿಷೇಧ ಅವಧಿ ರವಿವಾರಕ್ಕೆ ಕೊನೆಗೊಂಡಿದೆ.

“ನಾನೀಗ ಸಂಪೂರ್ಣ ಸ್ವತಂತ್ರ. ನನ್ನ ಮೇಲೀಗ ಯಾವುದೇ ಆರೋಪಗಳಿಲ್ಲ. ನಾನು ಅತಿಯಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸಬಹುದಾಗಿದೆ. ಈಗಲೇ ಅಭ್ಯಾಸ ಆರಂಭಿಸಿ ಪ್ರತೀ ಎಸೆತದಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವುದು ನನ್ನ ಗುರಿ. ಇನ್ನೂ ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ನನ್ನಲ್ಲಿದೆ. ಯಾವ ತಂಡವನ್ನು ಪ್ರತಿನಿಧಿಸಿದರೂ ಶ್ರೇಷ್ಠ ಬೌಲಿಂಗ್‌ ನಡೆಸುವುದು ನನ್ನ ಗುರಿ’ ಎಂಬುದಾಗಿ 37 ವರ್ಷದ ಶ್ರೀಶಾಂತ್‌ ಹೇಳಿದ್ದಾರೆ.

ತನಗೆ ನಿಷೇಧದಲ್ಲಿ ರಿಯಾಯಿತು ನೀಡಿ, ಕನಿಷ್ಠ ದೇಶಿ ಕ್ರಿಕೆಟ್‌ನಲ್ಲಾದರೂ ಆಡಲು ಅವಕಾಶ ನೀಡಿ ಎಂದು ಶ್ರೀಶಾಂತ್‌ ಕೆಲವು ತಿಂಗಳ ಹಿಂದೆ ಬಿಸಿಸಿಐಗೆ ಮನವಿ ಮಾಡಿದ್ದರು.

“ನಾನು ಫ್ರೆಂಡ್ಲಿ ಮ್ಯಾಚ್‌ ಆಡುವಾಗಲೂ ಕ್ರಿಕೆಟಿಗೆ ಮೋಸ ಮಾಡಿದವನಲ್ಲ. ತಂಡ ಸೋಲಬೇಕೆಂದು ಬಯಸಿದವನಲ್ಲ. ನಿಧಾನ ಗತಿಯಲ್ಲಿ ಚೆಂಡು ಎಸೆದವನೂ ಅಲ್ಲ. ನನ್ನ ಬಗ್ಗೆ ವ್ಯತಿರಿಕ್ತ ಭಾವನೆಗಳಿದ್ದರೆ ದಯವಿಟ್ಟು ಬದಲಾಯಿಸಿಕೊಳ್ಳಿ’ ಎಂದು ಶ್ರೀಶಾಂತ್‌ ಇತ್ತೀಚೆಗೆ ಹೇಳಿದ್ದರು.

2013ರ ಪ್ರಕರಣ
2013ರ ಐಪಿಎಲ್‌ ಪಂದ್ಯಾವಳಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಆರೋಪದಡಿ ಶ್ರೀಶಾಂತ್‌ ಅವರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ 6 ವರ್ಷಗಳ ಶಿಕ್ಷೆ ಪೂರ್ತಿಗೊಂಡ ಬಳಿಕ, ಕಳೆದ ವರ್ಷ ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ. ಜೈನ್‌ ಈ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿದ್ದರು.

2013ರ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡುತ್ತಿದ್ದಾಗ ಶ್ರೀಶಾಂತ್‌ ಸ್ಪಾಟ್‌ ಫಿಕ್ಸಿಂಗ್‌ ವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇವರೊಂದಿಗೆ ಸಹ ಆಟಗಾರರಾದ ಅಜಿತ್‌ ಚಂಡೀಲ ಮತ್ತು ಅಂಕಿತ್‌ ಚವಾಣ್‌ ಅವರನ್ನೂ ನಿಷೇಧಿಸಲಾಗಿತ್ತು.

Comments are closed.