
ಭೋಪಾಲ್: ಮದುವೆಯಾದ ಕೇವಲ ಹದಿನೈದು ದಿನದಲ್ಲೇ ನವವಿವಾಹಿತ ಪತಿ ಆತ್ಮಹತ್ಯೆಗೆ ಶರಣಾದ ನೋವಿನಲ್ಲೇ ನವವಧುವೊಬ್ಬಳು ಶಾಪಿಂಗ್ ಮಾಲ್ನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್ ನಿಂದ ವರದಿಯಾಗಿದೆ.
ಮೆಡಿಕಲ್ ವಿದ್ಯಾರ್ಥಿನಿಯಾಗಿರುವ ನವವಧು ಬದುಕುಳಿದಿದ್ದು, ಗಂಭೀರ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನವಜೋಡಿಗೆ ಹದಿನೈದು ದಿನಗಳ ಹಿಂದಷ್ಟೇ ಮದುವೆಯಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ವಧುವಿನ ಪತಿ ಸುಭಮ್ ಖಾಂದೇಲ್ವಾಲ್ ಉಜ್ಜೈನ್ ಜಿಲ್ಲೆಯಲ್ಲಿ ಗುತ್ತಿಗೆದಾರನಾಗಿದ್ದ. ಬುಧವಾರವಷ್ಟೇ ಆತ್ಮಹತ್ಯೆ ಮಾಡಿಕೊಂಡ ಆತ ತನ್ನ ಸಾವಿಗೆ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ನ ಇಬ್ಬರು ಇಂಜಿನಿಯರ್ಗಳು ಕಾರಣ ಎಂದು ಡೆತ್ನೋಟ್ ಬರೆದಿಟ್ಟಿದ್ದ.
ಉಜ್ಜೈನ್ನ ಖಾಸಗಿ ಕಾಲೇಜೊಂದರಲ್ಲಿ ಮೆಡಿಸಿನ್ ಓದುತ್ತಿರುವ ನವವಧು ಸಾನಿಯಾ ಖಾಂದೇಲ್ವಾಲ್, ಪತಿ ಕಳೆದುಕೊಂಡ ದುಃಖದಿಂದಲೇ ಶಾಪಿಂಗ್ ಮಾಲ್ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಾಯಗೊಂಡಿರುವ ಆಕೆಗೆ ಇಂದೋರ್ನ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾನಿಯಾಳ ತಲೆ ಮತ್ತು ಕಾಲಿಗೆ ಗಾಯಗಳಾಗಿದ್ದು, ವೈದ್ಯರ ನಿಗಾದಲ್ಲಿ ಇಡಲಾಗಿದೆ.
ಹಣ್ಣಿನ ಜ್ಯೂಸ್ ತರುವುದಾಗಿ ತಂದೆಗೆ ಹೇಳಿ ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟ ಸಾನಿಯಾ ನೇರವಾಗಿ ವಿಜಯನಗರದಲ್ಲಿರುವ ಶಾಪಿಂಗ್ ಮಾಲ್ ಒಂದಕ್ಕೆ ತೆರಳಿದ್ದಾಳೆ. ಬಳಿಕ ಮಾಲ್ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಮಾಲ್ನ ಉದ್ಯೋಗಿಗಳು ಎಂವೈ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ನಾನು ನನ್ನ ಗಂಡನೊಟ್ಟಿಗೆ ಇರಬೇಕೆಂದು ಪತ್ರವೊಂದನ್ನು ಸಾನಿಯಾ ಬರೆದಿದ್ದಳು. ಪತಿ ಇಲ್ಲದ ನೋವಿನಲ್ಲೇ ಆತ್ಮಹತ್ಯೆಗೆ ನಿರ್ಧರಿಸಿದ್ದಳು ಎನ್ನಲಾಗಿದೆ.
Comments are closed.