ಮಂಗಳೂರು: ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರದ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ನಿರಂತರ ಮಳೆಯ ಪರಿಣಾಮ ಕೊಟ್ಟಾರ ಚೌಕಿ, ಅಳಕೆ, ಅಶೋಕ್ ನಗರ, ಪಾಂಡೇಶ್ವರ ಭಾಗದಲ್ಲಿ ನೀರು ನಿಂತಿದ್ದು, ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ.
ಇದೇ ವೇಳೆ ಭಾರೀ ಮಳೆಗೆ ನಗರದ ಕುಂಟಿಕಾನದ ಸಮೀಪದ ದೇರೆಬೈಲ್ ನಲ್ಲಿರುವ ವಸತಿ ಸಮುಚ್ಛಯವೊಂದರ ಹಿಂದಿನ ಎತ್ತರದ ತಡೆಗೋಡೆ ಕುಸಿದು ಬಿದ್ದು, ಮಣ್ಣಿನಡಿ ಸುಮಾರು 8 ಕ್ಕೂ ಮಿಕ್ಕಿ ಕಾರುಗಳು ಹೂತಿರುವ ಶಂಕೆ ವ್ಯಕ್ತವಾಗಿದೆ. ಬಿಡದೇ ಸುರಿದ ಮಳೆಯಿಂದಾಗಿ ಮಂಗಳೂರಿನ ಕುಂಟಿಕಾನದ ಸಮೀಪದ 12 ಅಂತಸ್ತಿನ ಎಸೆಲ್ ಹೈಟ್ಸ್ ಫ್ಲ್ಯಾಟ್ ಹಿಂಭಾಗದಲ್ಲಿ ಧರೆ ಕುಸಿದಿದೆ.
ತಡೆಗೋಡೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು ಅದರ ಹಿಂದುಗಡೆಯ ಹಾಸ್ಟೆಲ್ ಆವರಣದೊಳಗೆ ಮಣ್ಣು ರಾಶಿಯಾಗಿ ಬಿದ್ದಿದೆ. ಇದರ ಮತ್ತೊಂದು ಭಾಗದ ಗೋಡೆಯು ಕುಸಿಯುವ ಭೀತಿಯಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ. ಮಳೆಯೂ ಸುರಿಯುತ್ತಿದ್ದು, ಮತ್ತಷ್ಟು ಮಣ್ಣು ಜರಿದು ಬೀಳುವ ಭೀತಿ ಇರುವ ಕಾರಣ ಕಾರ್ಯಾಚರಣೆಯನ್ನು ಇನ್ನೂ ಆರಂಭವಾಗಿಲ್ಲ.
ಮುಂಜಾಗ್ರತಾ ಕ್ರಮವಾಗಿ ಫ್ಲ್ಯಾಟ್ನಲ್ಲಿದ್ದ ನೂರಾರು ಮಂದಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಫ್ಲಾಟ್ ಹಿಂಭಾಗದ ಹರಿಪದವುಗೆ ಹೋಗುವ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಎಸ್ಡಿಆರ್ಎಫ್, ಎನ್ಡಿಆರ್ಎಫ್ ದಳದ ಸಿಬ್ಬಂದಿ ಹಾಗೂ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಮಾಜಿ ಮೇಯರ್, ಸ್ಥಳೀಯ ಕಾರ್ಪೊರೇಟರ್ ಶಶಿಧರ್ ಹೆಗ್ಡೆಆಗಮಿಸಿ ಪರಿಶೀಲನೆ ನಡೆಸಿದ್ದಾರೆ.























Comments are closed.