
ನವದೆಹಲಿ: ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ನಿರ್ಮಿಸಲಾಗಿದ್ದ 1.75 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.
ಘರ್ ಪ್ರವೇಶ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಮನೆ ಮಾಲೀಕರಿಗೆ ಮನೆ ಕೀ ನೀಡುವ ಮೂಲಕ ಶುಭ ಹಾರೈಸಿದರು.
ಮಧ್ಯಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರಿಗಾಗಿ ಈ ಮನೆಗಳು ನಿರ್ಮಾಣವಾಗಿದ್ದು, ಮಧ್ಯಪ್ರದೇಶ ರಾಜ್ಯ ಒಂದರಲ್ಲೇ ಈವರೆಗೆ ಸ್ವಂತ ಸೂರು ಇಲ್ಲದ ಸುಮಾರು 17 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಕ್ಕಿದೆ.
ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 1.20 ಲಕ್ಷ ರೂ.ಗಳ ಸರ್ಕಾರದ ಅನುದಾನ ಸಿಗುತ್ತಿದೆ. ಇದರಲ್ಲಿ ಶೇ.60 ಕೇಂದ್ರದಿಂದ ಮತ್ತು ಶೇ.40 ರಾಜ್ಯದಿಂದ ಹಣ ನೀಡಲಾಗುತ್ತದೆ. ಈ ಯೋಜನೆಯಡಿ ದೇಶಾದ್ಯಂತ 2022ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಭಾರತೀಯ ಜನತಾ ಪಕ್ಷದ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಇತರರು ಭಾಗವಹಿಸಿದ್ದರು.
“ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಲ್ಯಾಣ ಯೋಜನೆಗಳ ಮೂಲಕ ದೇಶದ ದಿಕ್ಕು ಹಾಗೂ ಸ್ಥಾನಮಾನವನ್ನು ಬದಲಾಯಿಸಿದ್ದಾರೆ. ಇದಕ್ಕಾಗಿ ಮಧ್ಯಪ್ರದೇಶದ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಚೌಹಾನ್ ಹೇಳಿದರು.
“ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ನಾವು 20 ಲಕ್ಷ ಮನೆಗಳಲ್ಲಿ 17 ಲಕ್ಷ ಮನೆ ನಿರ್ಮಿಸಿದ್ದೇವೆ. ದೇಶದ ಪ್ರತಿಯೊಬ್ಬ ಬಡವರಿಗೆ ಸ್ವಂತ ಮನೆ ಇರಬೇಕು ಎನ್ನುವುದು ಪ್ರಧಾನಮಂತ್ರಿ ಅವರ ಕನಸು. ಅವರ ಆಶೀರ್ವಾದದಿಂದ ಮಧ್ಯಪ್ರದೇಶ ಈ ದಿಕ್ಕಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ” ಎಂದು ಅವರು ಹೇಳಿದರು
Comments are closed.