
ಮಂಗಳೂರು, ಸೆಪ್ಟಂಬರ್.05: ಕರೋನ ಹಿನ್ನೆಲೆಯಲ್ಲಿ ಯಾರೆಲ್ಲ ಶಿಕ್ಷಕರು, ಉಪನ್ಯಾಕರು ವೇತನದಿಂದ ವಂಚಿತರಾಗಿದ್ದಾರೊ ಅವರಿಗೆ ಸರ್ಕಾರ ತಕ್ಷಣ ತಿಂಗಳಿಗೆ 10 ಸಾವಿರ ರೂ.ನಂತೆ ಆರ್ಥಿಕ ಸಹಾಯ ನೀಡಬೇಕು ಎಂದು ಮಂಗಳೂರು ವಿವಿ ಶೈಕ್ಷಣಿಕ ಪರಿಷತ್ ಮಾಜಿ ಸದಸ್ಯ ಅಭಿಷೇಕ್ ಉಳ್ಳಾಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರೋನ ಹಿನ್ನೆಲೆಯಲ್ಲಿ ಶಿಕ್ಷಕರು, ಉಪನ್ಯಾಕರು ವೇತನವಿಲ್ಲದೆ ದುಡಿಯುವಂತಾಗಿದ್ದು, ತಮ್ಮ ಕುಟುಂಬ ನಿರ್ವಹಣೆಗಾಗಿ ಸಾಲ ಮಾಡವ ಪರಿಸ್ಥಿತಿ ಬಂದಿದೆ. ಹಲವು ಶಿಕ್ಷಣ ಸಂಸ್ಥೆಗಳು ಶೇ.50, 70ರಷ್ಟು ವೇತನ ಪಾವತಿಸುತ್ತಿದೆ.
ಕೋವಿಡ್ ಕಾರಣ ನೀಡಿ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಾಲೇಜು ವಿಭಾಗದ ಎಲ್ಲ ಶಿಕ್ಷಕರನ್ನು ಕೆಲಸದಿಂದ ತೆಗೆದಿದೆ. ಇಂತಹ ಪರಿಸ್ಥಿಯಲ್ಲಿ ಯಾರೆಲ್ಲ ಶಿಕ್ಷಕರು ವೇತನವಿಲ್ಲದೆ ವೇತನದಿಂದ ವಂಚಿತ ರಾಗಿದ್ದಾರೊ ಅವರಿಗೆ ಸರ್ಕಾರ ತಕ್ಷಣ ತಿಂಗಳಿಗೆ 10 ಸಾವಿರ ರೂ.ನಂತೆ ಆರ್ಥಿಕ ಸಹಾಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಹಲವಾರು ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಿದೆ. ಆದರೆ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ನೀಡುವ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿ ಪಡಿಸದೆ ನಿರ್ಲಕ್ಷ ವಹಿಸಿದೆ. ಆದ್ದರಿಂದ ಸರ್ಕಾರ ಶೈಕ್ಷಣಿಕ ತಜ್ಞರ ಸಮಿತಿಯೊಂದನ್ನು ರಚಿಸಿ ಅವರಿಂದ ಶಿಕ್ಷಕರ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಬೇಕು. ಕನಿಷ್ಠ ವೇತನ ನೀಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಬೇಕು ಎಂದು ಅಭಿಷೇಕ್ ಉಳ್ಳಾಲ್ ಮನವಿ ಮಾಡಿದ್ದಾರೆ.
ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಎಂಬುದೇ ನಮಗೆ ಹೊಸದು. ಅದರಲ್ಲೂ ಹೆಚ್ಚಿನ ಶಿಕ್ಷಕರು ಈ ವ್ಯವಸ್ಥೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಶಿಕ್ಷಕರು ಆನ್‌ಲೈನ್‌ನಲ್ಲಿ ಪಾಠ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧ.
ಆಡಳಿತ ಮಂಡಳಿ ಅಂತಹ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿದ ಅಭಿಷೇಕ್ ಉಳ್ಳಾಲ್ ಅವರು, ಆರ್ಥಿಕವಾಗಿ ಸಬಲರಾಗಿರುವ ಹೆತ್ತವರು ತಮ್ಮ ಮಕ್ಕಳ ಶಾಲಾ ಕಾಲೇಜು ಶುಲ್ಕವನ್ನು ಸ್ವಲ್ಪವಾದರೂ ಪಾವತಿಸಿದರೆ, ಆಡಳಿತ ಮಂಡಳಿ ಶಿಕ್ಷಕರ ವೇತನ ನೀಡಲು ಸಾಧ್ಯವಾಗಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಉಪಸ್ಥಿತರಿದ್ದರು.
Comments are closed.