ಕರಾವಳಿ

ಮಂಗಳೂರು ಗೋಲಿಬಾರ್ ಪ್ರಕರಣದ ಅಂತಿಮ ವಿಚಾರಣೆ ಮುಕ್ತಾಯ : ಸುಮಾರು 146 ಮಂದಿಯ ಹೇಳಿಕೆ ದಾಖಲು

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.02: ಮಂಗಳೂರಿನಲ್ಲಿ  2019ರ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆಯ ದಿನದಂದು 45 ಮಂದಿ ಸಾರ್ವಜನಿಕರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ವೈದ್ಯರು ಹಾಗೂ 13 ಮಂದಿ ಪೊಲೀಸರ ಹೇಳಿಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಂಗಳೂರಿನಲ್ಲಿ 2019ರ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೀಟ್ ವಿಚಾರಣೆ ಸೆ.1ರಂದು ಮುಕ್ತಾಯಗೊಂಡಿದ್ದು, ವಿಚಾರಣೆ ಅನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಜಗದೀಶ್ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ವಿಚಾರಣೆಯ ಅಂತಿಮ ದಿನವಾದ ಮಂಗಳವಾರ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ವಿಚಾರಣೆಯಲ್ಲಿ ಪಾಲ್ಗೊಂಡರು. ವೀಡಿಯೊ ತುಣುಕು ಸೇರಿದಂತೆ ವಿವಿಧ ದಾಖಲೆಗಳು ಸಲ್ಲಿಕೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಸುಮಾರು 146 ಮಂದಿಯ ವಿಚಾರಣೆ ನಡೆದಿದೆ ಎಂದವರು ತಿಳಿಸಿದ್ದಾರೆ.

ಕೊನೆಯ ದಿನ ದಕ್ಷಿಣ ಕನ್ನಡದ ಅಂದಿನ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿಕೆ ಪಡೆದುಕೊಳ್ಳಲಾಯಿತು. ಕಮಿಷನರ್ ಪರವಾಗಿ ಎಸಿಪಿಯವರು ಹೇಳಿಕೆ ಮತ್ತು ದಾಖಲೆಗಳನ್ನು ನೀಡಿದ್ದಾರೆ.

ಎಫ್‌ಎಸ್‌ಎಲ್ ವರದಿಗೆ ಸಂಬಂಧಿಸಿ ಮೂವರು ವೈದ್ಯರ ಹೇಳಿಕೆ ಪಡೆಯಲಾಗಿದೆ. ವರದಿ ಸಲ್ಲಿಕೆಗೆ ಸರಕಾರ ಸೆ.20ರವರೆಗೆ ಅವಧಿ ನೀಡಿದೆ. ಅಷ್ಟರೊಳಗೆ ಸಲ್ಲಿಸಲಾಗುವುದು  ಎಂದು ಮ್ಯಾಜಿಸ್ಟ್ರೀಟ್ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಡಾ.ಜಿ.ಜಗದೀಶ್ ತಿಳಿಸಿದ್ದಾರೆ.

Comments are closed.