
ಬೆಂಗಳೂರು (ಆಗಸ್ಟ್ 28); ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ತನ್ನ ಕಬಂಧಬಾಹುಗಳನ್ನು ಚಾಚಿರುವುದು ನಿಜ. ಈ ಡ್ರಗ್‌ಗೆ ಅನೇಕ ನಟ-ನಟಿಯರು ಅಡಿಕ್ಟ್ ಆಗುತ್ತಿದ್ದಾರೆ. ಕೊಕೇನ್ ವರೆಗೂ ನಮ್ಮ ಇಂಡಸ್ಟ್ರಿ ಬೆಳೆದಿದೆ. ಆದರೆ, ಪೊಲೀಸರು ನನಗೆ ಸೂಕ್ತ ರಕ್ಷಣೆ ನೀಡಿದರೆ ನಾನು ಇದನ್ನು ಬಳಸುವವರ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ಗುರುವಾರ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ವಿಚಾರಣ ವೇಳೆ ಅನೇಕ ಅಚ್ಚರಿಯ ಮಾಹಿತಿಗಳು ಹೊರಬೀಳುತ್ತಿವೆ. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಮರದ, ರಟ್ಟಿನ ಬಾಕ್ಸ್ಗಳಲ್ಲಿ ಮಕ್ಕಳ ಆಟಿಕೆ ವಸ್ತುಗಳಲ್ಲಿ ಡ್ರಗ್ಸ್ ಪಾರ್ಸೆಲ್ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ತಿಳಿದುಬಂದಿದೆ.
ಜರ್ಮನಿ, ಬೆಲ್ಜಿಯಂ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್ ಪಾರ್ಸಲ್ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು. ಡಾರ್ಕ್ ವೆಬ್ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು. ದೊಡ್ಡ ಗುಬ್ಬಿಯ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಅನಿಕಾ ಎಂಬಾಕೆ ಕೆ. ರೆಹಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ಬುಕ್ಕಿಂಗ್ ಮಾಡುತ್ತಿದ್ದಳು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ರೆಹಮಾನ್ ಪಡೆದುಕೊಂಡು, ಅದನ್ನು ಅನಿಕಾ, ಅನೂಪ್ ಹಾಗೂ ರಾಜೇಶ್ಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಈ ವಿಚಾರ ದೊಡ್ಡ ಸುದ್ದಿಯಾಗುತ್ತಿದ್ದಂತೆ ಈ ಕುರಿತು ಸ್ಫೋಟಕ ಮಾಹಿತಿ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, “ಸ್ಯಾಂಡಲ್‌ವುಡ್‌ಬಲ್ಲಿ ಡ್ರಗ್ ಮಾಫಿಯಾ ಇರೋದು ನಿಜ.. ನಾನೇ ನೋಡಿದ್ದೀನಿ. ದುಡ್ಡಿನ ಹಿಂದೆ ಬಿದ್ದು ಕೆಲ ಯುವ ನಟ ನಟಿಯರು ಡ್ರಗ್ ಮಾಫಿಯಾ ಬೆನ್ನುಬಿದ್ದಿದ್ದಾರೆ. ನೈಟ್ ಪಾರ್ಟಿ, ರೇವ್ ಪಾರ್ಟಿ ಎಲ್ಲವೂ ನಡೀತಿದೆ. ಯುವ ನಟರು ಇದ್ದಕ್ಕೆ ಅಡಿಕ್ಟ್ ಆಗಿದ್ದಾರೆ.
ಯಾರು ಡ್ರಗ್ಸ್ ತಗೋತಿದ್ದಾರೆ ಅಂತಾ ನನಗೆ ಗೊತ್ತಿದೆ. ನನಗೆ ಪೊಲೀಸ್ ಇಲಾಖೆ ರಕ್ಷಣೆ ಕೊಟ್ಟರೇ ಖಂಡಿತಾ ಹೆಸರು ಬಹಿರಂಗ ಪಡಿಸ್ತೀನಿ. ದೊಡ್ಡ ಸ್ಟಾರ್ ನಟರು ನನ್ನ ಸ್ನೇಹಿತರು. ನಾನು ನೋಡಿದ್ದಂತೆ ದೊಡ್ಡ ಸ್ಟಾರ್‌ಗಳು ಯಾರೂ ಇದ್ದಕ್ಕೆ ಅಡಿಕ್ಟ್ ಆಗಿಲ್ಲ. ಆದರೆ, ಒಂದೆರಡು ಸಿನಿಮಾಗಳು ಮಾಡಿದ ನಟ ನಟಿಯರು ಈ ಡ್ರಗ್ ಮಾಫಿಯಾದಲ್ಲಿ ಮುಳುಗಿದ್ದಾರೆ. ದುಡ್ಡಿನ ವ್ಯಾಮೋಹ, ಐಷಾರಾಮಿ ಕಾರಿನ ಹಿಂದೆ ಬಿದ್ದು ಇಂತಹ ಕೆಲಸಗಳಿಗೆ ಕೈ ಹಾಕ್ತಿದ್ದಾರೆ ಪೊಲೀಸ್ ಇಲಾಖೆ ಇಂಥವರ ಹೆಸರು ಬಹಿರಂಗ ಪಡಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ಸಿಗಲಿದೆ” ಎಂದು ತಿಳಿಸಿದ್ದಾರೆ.
Comments are closed.