
ಮಂಗಳೂರು, ಆಗಸ್ಟ್.21 : ಮೂಲತ: ಫರಂಗಿಪೇಟೆ ಸಮೀಪದ ಸುಜೇರ್ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಸುಜೀರ್ ಕುಟುಂಬದ ಸದಸ್ಯರಾದ ಸುಜೀರ್ ಪ್ರವೀಣ್ ರವರು ಕಳೆದ 31 ವರ್ಷ ಗಳಿಂದ ನಿರಂತರವಾಗಿ ಗಣಪತಿಯ ವಿಗ್ರಹ ರಚನೆ ಮತ್ತು ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೇ ಸಾರ್ವಜನಿಕ ಗಣೇಶೋತ್ಸವದಂತೆ ವರ್ಷ ವರ್ಷ ವಿವಿಧ ರೀತಿಯ ಗಣಪತಿ ರಚಿಸದೇ ಸಂಪ್ರದಾಯಿಕ ರೀತಿಯಲ್ಲಿ ಪರಂಪರಾಗತವಾಗಿ ಆರಾಧನೆ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ .
ಸುಜೀರ್ ನಾಗಪ್ಪ ಆಚಾರ್ಯರ ಪುತ್ರ ಸುಜೀರ್ ಗಣಪತಿ ಆಚಾರ್ಯರು ಪ್ರಸಿದ್ಧ ಕಲಾತ್ಮಕ ಸ್ವರ್ಣ ಶಿಲ್ಪಿಯಾಗಿದ್ದರು . ಇವರು ಮಂಜುಟ್ಟಿ ಒಳಗೆ ಹಾಕ ಬಹುದಂತಹ ಚಿನ್ನದ ಚೈನ್ ಮಾಡಿರುತ್ತಾರೆ . ಚಿನ್ನಾಭರಣಗಳ ಕುಸುರಿ ಕೆಲಸದ ಕಲಾ ನೈಪುಣ್ಯತೆಗೆ ಆ ಕಾಲದ ಮೈಸೂರು ಮಹಾರಾರಾಜರು ಇವರಿಗೆ ಪಾರಿತೋಷಕ ನೀಡಿ ಗೌರವಿಸಿದ್ದರು .
ಸುಜೀರ್ ಗಣಪತಿ ಆಚಾರ್ಯರ ನಂತರ ಅವರ ಪುತ್ರರಾದ ಸುಜೀರ್ ಜಯರಾಮ ಆಚಾರ್ಯ, ಯುವರಾಜ ಆಚಾರ್ಯ, ವೇಣುಗೋಪಾಲ್ ಆಚಾರ್ಯ, ಶಿವಶಂಕರ ಆಚಾರ್ಯ, ರಮೇಶ್ ಆಚಾರ್ಯ ರವೀಂದ್ರ ಆಚಾರ್ಯ ಇವರುಗಳು ಗಣಪತಿಯ ಆರಾಧನೆಯನ್ನು ಮಾಡಿಕೊಂಡು ಬಂದಿದ್ದರು. .ಕಳೆದ ಹಲವಾರು ದಶಕಗಳಿಂದ ಸುಜೀರ್ ಪ್ರವೀಣ್, ಸುಜೀರ್ ವಿನೋದ್ ಕುಟುಂಬದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಚೌತಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿ ಕೊಂಡು ಬಂದಿದ್ದಾರೆ.

ಆಗಸ್ಟ್ 22ರಂದು 135ನೇ ವರ್ಷದ ಚೌತಿ ಹಬ್ಬ :
ವಿಶ್ವಬ್ರಾಹ್ಮಣ ಸಮಾಜದ ಸುಜೀರ್ ಕುಟುಂಬಿಕರ 135ನೇ ವರ್ಷದ ಚೌತಿ ಹಬ್ಬಆಗಸ್ಟ್ 22ರಂದು ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಸಮೀಪವಿರುವ ವ್ಉಡ್ ಲ್ಯಾಂಡ್ಸ್ ಬಳಿಯ “ಸುಜೀರ್ ನಿವಾಸ್” ದಲ್ಲಿ ಜರಗಲಿದೆ.
ಬೆಳಗ್ಗೆ ಗಣ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಮನೆ ಆವರಣದ ಬಾವಿಯಲ್ಲಿ ದೇವರ ವಿಗ್ರಹದ ವಿಸರ್ಜನೆಯೊಂದಿಗೆ ಪೂಜೆ ಸಂಪನ್ನಗೊಳ್ಳಲಿದೆ. ಕೊರೊನ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಜನ ಸೇರದೆ ಸಂಪ್ರದಾಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸರಳ ರೀತಿಯಲ್ಲಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ.
ಕಳೆದ 134 ವರ್ಷಗಳಿಂದಲೂ ಮನೆಯಲ್ಲಿ ಶ್ರೀ ಗಣಪತಿಯ ಮೂರ್ತಿ ಮಾಡಲ್ಪಟ್ಟು ಪೂಜೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸುಜೀರ್ ಕುಟುಂಬದವರು ಮಾಡಿಕೊಂಡು 21 ಬಗೆಯ ವಿವಿಧ ಖಾದ್ಯಗಳನ್ನು ಮಾಡಿ ದೇವರಿಗೆ ಸಮರ್ಪಿಸುತ್ತಾ ಬಂದಿರುತ್ತಾರೆ. ಕಳೆದ 134 ವರ್ಷಗಳಿಂದಲೂ ಸುಜೀರ್ ಕುಟುಂಬದ ಸದಸ್ಯರೇ ಅವೆ ಮಣ್ಣಿನಿಂದ ಗಣಪತಿ ಮೂರ್ತಿ ಮಾಡಿ ಕೊಂಡು ಬಂದಿದ್ದಾರೆ.

ಸುಜೀರ್ ಗಣಪತಿ ಆಚರಣೆಯ ಹಿನ್ನೆಲೆ : ಸಂತಾನ ಪ್ರಾಪ್ತಿಯಾದರೆ…
ಸುಜೀರ್ ಎಂಬುದು ಫರಂಗಿಪೇಟೆ ಬಳಿ ಇದೆ. ಇಲ್ಲಿ ಸುಜೀರ್ ಕುಟುಂಬದ ಹಿರಿಯ ತಲೆಮಾರಿನ ಸುಜೀರ್ ನಾಗಪ್ಪ ಆಚಾರ್ಯರಿಗೆ ಸಂತಾನ ಭಾಗ್ಯ ಇಲ್ಲದ ಕಾರಣ ಅವರು ತನಗೆ ಸಂತಾನ ಪ್ರಾಪ್ತಿಯಾದರೆ ಅದರಲ್ಲೂ ಪುತ್ರ ಜನನ ಆದರೆ ಗಣಪತಿ ಎಂದು ಪುತ್ರನಿಗೆ ನಾಮಕರಣ ಮಾಡುತ್ತೇನೆ ಮತ್ತು ಪ್ರತೀ ವರ್ಷ ಚೌತಿ ಸಂದರ್ಭ ಗಣಪತಿ ವಿಗ್ರಹ ರಚಿಸಿ ಆರಾಧಿಸಿಕೊಂಡು ಬರುತ್ತೇನೆಂದು ಹರಕೆ ಹೊತ್ತ ಫಲವಾಗಿ 1885 ರಲ್ಲಿ ಸುಜೀರ್ ನಾಗಪ್ಪ ಆಚಾರ್ಯರಿಗೆ ಪುತ್ರ ಸಂತಾನ ಪ್ರಾಪ್ತಿ ಆಯಿತು.

ತಾನು ಹೇಳಿಕೊಂಡ ಹರಕೆಯಂತೆ ಪುತ್ರನಿಗೆ ಗಣಪತಿ ಎಂದು ನಾಮಕರಣ ಮಾಡಿ 1885 ಇಸವಿಯಿಂದ ಗಣೇಶ ಚಥುರ್ತಿ ಸಂದರ್ಭ ಗಣಪತಿಯ ವಿಗ್ರಹ ಆವೆಮಣ್ಣಿನಿಂದ ರಚಿಸಿ ನಿರಂತರವಾಗಿ ಸುಜೀರ್ ಕುಟುಂಬದ ಸದಸ್ಯರು ಹಾಗು ಅನೇಕ ಬಂಧು ಬಾಂಧವರ ಉಪಸ್ಥಿಯಲ್ಲಿ ಚೌತಿ ಹಬ್ಬವನ್ನು ಶೃದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ.
ಸಾರ್ವಜನಿಕರಿಗೂ ಹರಕೆ ಸಲ್ಲಿಸಲು ಅವಕಾಶ:
ಹರಕೆಯ ರೂಪದಲ್ಲಿ ಗಣಪತಿ ದೇವರಿಗೆ ಬೆಳ್ಳಿಯ ಕಿರೀಟ, ದಾಡೆ, ಪಾಶ ಅಂಕುಶ, ಬೆಳ್ಳಿಯ ಜನಿವಾರ ಚಿನ್ನದ ಕಣ್ಣು, ಬೆಳ್ಳಿಯ ಆಭರಣ ಇತ್ಯಾದಿಗಳನ್ನು ಸುಜೀರ್ ಕುಟುಂಬದವರಲ್ಲದೆ ಇತರರೂ ಹರಕೆಯ ರೂಪದಲ್ಲಿ ನೀಡಿರುತ್ತಾರೆ. ಈ ಬಾರಿಯ ಚೌತಿಗೂ ಕೆಲವರು ಹರಕೆ ರೂಪದಲ್ಲಿ ವಸ್ತುಗಳನ್ನು ನೀಡಿರುತ್ತಾರೆ ಎಂದು ಸುಜೀರ್ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಸುಜೀರ್ ವಿನೋದ್ “ಕನ್ನಡಿಗ ವರ್ಲ್ಡ್”ಗೆ ಮಾಹಿತಿ ನೀಡಿದ್ದಾರೆ.
Comments are closed.