ಕರಾವಳಿ

ಭಟ್ಕಳದ ಸಮುದ್ರದಲ್ಲಿ ಕೈರಂಪಣಿ ಬಲೆಗೆ ಮೀನುಗಳ ಜೊತೆ ಸಿಕ್ಕಿದ ಜೀವಂತ ಮೊಸಳೆ (Video)

Pinterest LinkedIn Tumblr

ಭಟ್ಕಳ: ಸಮುದ್ರದಲ್ಲಿ ಮೀನುಗಾರರ ಕೈರಂಪಣಿ ಬಲೆಗೆ ದೈತ್ಯ ಮೊಸಳೆಯೊಂದು ಸಿಕ್ಕ ವಿಚಿತ್ರ ಘಟನೆ ಭಟ್ಕಳ ತಾಲೂಕಿನ ಅಳ್ವೆಕೋಡಿನಲ್ಲಿ ಬುಧವಾರ ನಡೆದಿದೆ.ಸಾಂಪ್ರದಾಯಿಕ ಮೀನುಗಾರಿಕೆಯಾದ ಕೈರಂಪಣಿ ಮೀನುಗಾರಿಕೆ ಮಾಡುವ ಸಂದರ್ಭ ಹಾಕಿದ ಮೀನುಗಾರರ ಬಲೆಗೆ ಮೀನುಗಳ ಜೊತೆ ಮೊಸಳೆ ಸಿಲುಕಿದ್ದು ಮೀನುಗಾರರಲ್ಲಿ ಅಚ್ಚರಿಯುಂಟು ಮಾಡಿತ್ತು.

ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಮೊಸಳೆ ಬಲೆಗೆ ಸಿಕ್ಕಿರುವುದು ಇದೇ ಮೊದಲು ಎಂದು ಹಿರಿಯ ಮೀನುಗಾರರು ಹೇಳುತ್ತಾರೆ. ಕೆಲ ದಿನಗಳ ಹಿಂದೆ ಸುರಿದ ಬಾರೀ ಮಳೆ ಹೊಳೆಯಲ್ಲಿ ಉಂಟಾದ ನೆರೆಯಿಂದಾಗಿ ಮೊಸಳೆ ಸಮುದ್ರಕ್ಕೆ ನೆರೆ ನೀರಿನೊಂದಿಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಅಳ್ವೆಕೋಡಿಯ ಸಮೀಪದ ವೆಂಕಟಾಪುರ ಹೊಳೆಯಿಂದ ಮೊಸಳೆ ಹೋಗಿರಬಹುದು ಎನ್ನಲಾಗುತ್ತಿದೆ. ಸುಮಾರು ಏಳು ಅಡಿ ಉದ್ದದ ಮೊಸಳೆ ಇದಾಗಿದೆ.

ಮೀನುಗಾರರ ಬಲೆಗೆ ಸಿಕ್ಕ ಮೊಸಳೆಯನ್ನು ಸುರಕ್ಷಿತವಾಗಿ ಮೀನುಗಾರರು ಹಿಡಿದಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ರಕ್ಷಿಸಿ ಸಿಹಿ ನೀರಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.