ರಾಷ್ಟ್ರೀಯ

ಡಾಕ್ಟರ್, ಉಪನ್ಯಾಸಕ ಸೇರಿ ಮನೆಯಲ್ಲಿ ನಾಲ್ವರ ಶವ

Pinterest LinkedIn Tumblr


ನಾಗ್ಪುರ (ಮಹಾರಾಷ್ಟ್ರ): ಒಂದೇ ಕುಟುಂಬದ ನಾಲ್ವರ ಶವ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹಲವಾರು ಅನುಮಾನುಗಳು ಹುಟ್ಟಿಕೊಂಡಿವೆ.

ವೈದ್ಯೆಯಾಗಿರುವ ಡಾ. ಸುಷ್ಮಾ ರಾಣೆ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪತಿ ಧೀರಜ್ (42) ಮತ್ತು ಅವರ 11 ಮತ್ತು 5 ವರ್ಷದ ಇಬ್ಬರು ಮಕ್ಕಳ ಶವ ನಾಗ್ಪುರದ ಮನೆಯಲ್ಲಿ ಕಂಡುಬಂದಿದೆ. ಮೇಲ್ನೋಟಕ್ಕೆ ಡಾ.ಸುಷ್ಮಾ ಅವರು ಎಲ್ಲರನ್ನೂ ಕೊಂದು ನಂತರ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಂಡುಬಂದಿದೆ.

ಆದರೆ ಈ ಘಟನೆಯ ಹಿಂದೆ ಅನುಮಾನಗಳು ಇರುವುದಾಗಿ ಪೊಲೀಸರು ಹೇಳಿದ್ದಾರೆ. ಧೀರಜ್ ಮತ್ತು ಮಕ್ಕಳ ಮೃತದೇಹಗಳು ಮಾಸ್ಟರ್ ಬೆಡ್‌ರೂಂನ ಹಾಸಿಗೆಯ ಮೇಲೆ ಪತ್ತೆಯಾಗಿದ್ದರೆ, ವೈದ್ಯೆಯ ಶವವು ಸೀಲಿಂಗ್‌ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಕೊರಡಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಧೀರಜ್‌ ಅವರ ಚಿಕ್ಕಮ್ಮ ಕೂಡ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಅವರು ಬೆಡ್ ರೂಂ ಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಸಾವಿಗೀಡಾಗಿರುವುದು ಬೆಳಕಿಗೆ ಬಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಪೊಲೀಸರು, ಎರಡು ಸಿರಿಂಜ್ ಮತ್ತು ಡೆತ್‌ನೋಟ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಸುಷ್ಮಾ ಅವರು ಯಾವುದೋ ವಿಚಾರಕ್ಕೆ ಅಸಮಾಧಾನಗೊಂಡಿದ್ದರಿಂದಾಗಿ ಈ ರೀತಿಯ ಹೆಜ್ಜೆಯನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದು ಅವರ ಬರಹವೋ ಅಥವಾ ಇನ್ನಾರೋ ಬರೆದಿಟ್ಟಿರುವುದೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಮರಣೋತ್ತರ ಪರೀಕ್ಷೆ ನಂತರವಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.