ಕುಂದಾಪುರ: ಇಲ್ಲಿಗೆ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಕೋವಿಡ್ ಅಂತ್ಯ ಸಂಸ್ಕಾರ ತಂಡದವರು ಸೋಮವಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊಕ್ಕರ್ಣೆ ಮೂಲದ ವ್ಯಕ್ತಿಯೊಬ್ಬರು ಕೊರೊನಾ ಸೋಂಕು ತಗುಲಿದ್ದರಿಂದ ಕುಂದಾಪುರ ಹೊರ ವಲಯದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಭಾನುವಾರ ಅವರು ಮೃತರಾಗಿದ್ದರಿಂದ ಶವವನ್ನು ಕುಂದಾಪುರದ ಸರ್ಕಾರಿ ಶವಾಗಾರದಲ್ಲಿ ಇಡಲಾಗಿತ್ತು.
ಸೋಮವಾರ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಇದಕ್ಕೆ ಕೈ ಜೋಡಿಸಿದ್ದ ಉಡುಪಿ ಜಿಲ್ಲೆಯ ಹಿಂದೂ ಜಾಗರಣ ವೇದಿಕೆಯ ವಿಶೇಷ ಕಾರ್ಯಕರ್ತರು ಸರ್ಕಾರಿ ನಿಯಮಾವಳಿಯಂತೆ ಪಿಪಿಇ ಕಿಟ್ ಗಳನ್ನು ಧರಿಸಿ ಸುರಕ್ಷತೆಯನ್ನು ಕಾಯ್ದುಕೊಂಡು, ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಿದ್ದಾರೆ.
ನಗರದ ಚಿಕ್ಕನ್ ಸಾಲ್ ರಸ್ತೆಯಲ್ಲಿ ಹಿಂದೂ ರುದ್ರ ಭೂಮಿಯಲ್ಲಿ ನಡೆದ ಈ ಅಂತ್ಯಸಂಸ್ಕಾರದ ವೇಳೆ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಪ್ರಮುಖ ಪ್ರಕಾಶ್ ಕುಕ್ಕೆಹಳ್ಳಿ, ಕಾರ್ಯಕರ್ತರಾದ ಸಾಜನ್ ಶೆಟ್ಟಿ, ನವೀನ್ ಗಂಗೊಳ್ಳಿ, ಮಹೇಶ್ ಗಂಗೊಳ್ಳಿ, ಮಹೇಶ್ ಕುಕ್ಕೆಹಳ್ಳಿ ಇದ್ದರು.
Comments are closed.