ಕರಾವಳಿ

ಮಂಗಳೂರಿನಲ್ಲಿ ಪೊಲೀಸ್ ಕಟ್ಟೆಚ್ಚರ : ಮುಂಜಾಗ್ರತಾ ಕ್ರಮವಾಗಿ ಆರ್‌ಎಎಫ್- ಪೊಲೀಸರ ಪಥಸಂಚಲನ

Pinterest LinkedIn Tumblr

ಮಂಗಳೂರು : ಬೆಂಗಳೂರಿನಲ್ಲಿ ಕೆ.ಜಿ.ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಮತ್ತು ಆಗಸ್ಟ್. 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಆಗು ಹೋಗುಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಶಂಕಿತರ ಚಲನ ವಲನಗಳ ಬಗ್ಗೆ ಕಣ್ಗಾವಲು ಇರಿಸಲಾಗಿದೆ.

ಇದೇ ವೇಳೆ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರದಲ್ಲಿ ಆರ್‌ಎಎಫ್ (ಕ್ಷಿಪ್ರ ಕ್ರಿಯಾ ಪಡೆ) ಹಾಗೂ ಮಂಗಳೂರು ನಗರ ಪೊಲೀಸರು ಗುರುವಾರ ಪಥಸಂಚಲನೆ ನಡೆಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ವಿವಿಧ ಪೋಸ್ಟ್‌ಗಳು, ಅವಹೇಳನಕಾರಿ ಬರಹಗಳು, ಕಮೆಂಟ್‌ ಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ನಗರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು ಈ ಕುರಿತು ಈಗಾಗಲೇ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ವಿಕಾಶ್‌ ಕುಮಾರ್‌ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರವಣಿಗೆಗಳು ಕಂಡು ಬಂದರೆ ಅವುಗಳನ್ನು ಇನ್ನೊಬ್ಬರಿಗೆ ರವಾನಿಸುವ ಬದಲು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್‌ ಆಯುಕ್ತ ಮನವಿ ಮಾಡಿದ್ದಾರೆ.

Comments are closed.