
ಬಳ್ಳಾರಿ(ಆಗಸ್ಟ್. 12): ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ 4 ವರ್ಷಗಳ ಹಿಂದೆ ಟ್ರಕ್ ಹತ್ತಿ ಪಶ್ಚಿಮ ಬಂಗಾಳದ ತಲುಪಿ ಬಿದಿ ಬಿದಿ ಹುಚ್ಚನಂತೆ ಅಲೆದಾಡುತ್ತಿದ್ದ ವ್ಯಕ್ತಿಯೋರ್ವ ಅತ್ಯಂತ ಸುರಕ್ಷಿತವಾಗಿ ತನ್ನ ಮರಳಿಗೂಡಿಗೆ ಸೇರಿದ್ದಾನೆ. ಅದು ಆರೋಗ್ಯಯುತವಾಗಿ. ಇದಕ್ಕೆಲ್ಲ ಕಾರಣ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮುತುವರ್ಜಿ ಮತ್ತು ಮಾನವೀಯತೆಯ ಸ್ಪರ್ಶ!
ಹೌದು! ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪುರ ಗ್ರಾಮದ ವೆಂಕಟೇಶ ತಂದೆ ತಿಮ್ಮಪ್ಪ ಎನ್ನುವ 25 ರಿಂದ 26 ವಯೋಮಾನದ ಆಸುಪಾಸಿನ ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. 4 ವರ್ಷಗಳ ಹಿಂದೆ ಟ್ರಕ್ವೊಂದನ್ನು ಹತ್ತಿಕೊಂಡು ಪಶ್ಚಿಮ ಬಂಗಾಳದ ಮಾಲ್ಡಾ ತಲುಪಿದ್ದ. ಅಲ್ಲಿ ಬೀದಿಬೀದಿ ಹುಚ್ಚನ ರೀತಿಯಲ್ಲಿ ಅಲೆದಾಡಿದ್ದ. ಕೈಕಾಲುಗಳಿಗೆಲ್ಲ ಗಾಯ, ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ. ತಾನೆಲ್ಲಿದ್ದೇನೆ ಎಂಬ ಅರಿವು ಸಹ ಅವನಿಗಿರದೇ ನಿತ್ಯ ನಿರಂತರ ಅಲೆದಾಡಿದ್ದ.ಈ ವೆಂಕಟೇಶ ಹುಚ್ಚನಂತೆ ಬೀದಿಬೀದಿ ಅಲೆದಾಡುತ್ತಿದ್ದುದನ್ನು ಗಮನಿಸಿದ ಸ್ವಯಂಸೇವಾ ಸಂಸ್ಥೆಯೊಂದು ಅವರನ್ನು ಕರೆದುಕೊಂಡು ಸೂಕ್ತ ಚಿಕಿತ್ಸೆ ನೀಡಿ ವಿಶೇಷ ಆರೈಕೆ ಮಾಡಿತ್ತು.
ಇದನ್ನು ಅಲ್ಲಿನ ಸ್ಥಳೀಯ ಮಾಲ್ಡಾ ಜಿಲ್ಲಾಧಿಕಾರಿಗಳಿಗೆ ಎನ್ಜಿಒ ಪ್ರಮುಖರು ವಿಷಯ ಮುಟ್ಟಿಸಿದ್ದರು. ಮಾಲ್ಡಾ ಜಿಲ್ಲಾಧಿಕಾರಿಗಳು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿಯುತ್ತಲೇ ಕಾರ್ಯಪ್ರವೃತ್ತರಾದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾಲ್ಡಾ ಡಿಸಿ ಅವರ ಮೂಲಕ ಎನ್ಜಿಒ ಸಂಪರ್ಕಿಸಿ ವೆಂಕಟೇಶನಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು ಮತ್ತು ಅದಕ್ಕೆ ಬೇಕಾಗುವ ಖರ್ಚು-ವೆಚ್ಚ ಕೂಡ ಭರಿಸಿದರು.
ವೆಂಕಟೇಶನ ಆರೋಗ್ಯ ನಿಧಾನವಾಗಿ ಸುಧಾರಿಸಿತು. ಆರೋಗ್ಯ ಸುಧಾರಿಸಿದ ನಂತರ ವೆಂಕಟೇಶನಿಗೆ ಮಾಲ್ಡಾ ಜಿಲ್ಲಾಡಳಿತ ಹಾಗೂ ಎನ್ಜಿಒ ಸಹಕಾರದೊಂದಿಗೆ ಮಾಲ್ಡಾದಿಂದ ಕಲ್ಕತ್ತಾ ವಿಮಾನ ನಿಲ್ದಾಣಕ್ಕೆ ಕರೆತಂದು ಬಳ್ಳಾರಿ ಜಿಲ್ಲಾಡಳಿತದ ವೆಚ್ಚದಡಿ ಕಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬುಧವಾರ ಕರೆ ತಂದರು. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ವೆಂಕಟೇಶನ ಸಹೋದರಿಬ್ಬರು ವೆಂಕಟೇಶನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಹೋದರರಿಬ್ಬರ ಮಿಲನ ಮತ್ತು ಸಂತೋಷ, ಆನಂದಭಾಷ್ಪಕ್ಕೆ ವಿಮಾನನಿಲ್ದಾಣ ಸಾಕ್ಷಿಯಾಯಿತು.
ಎಂದೆಂದಿಗೂ ಸಿಗಲಾರೆವು ಎಂದು ಕೊಂಡವರು ಸಿಕ್ಕ ಖುಷಿ ಅವರದ್ದು. ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿಶೇಷ ಕಾರಿನ ವ್ಯವಸ್ಥೆ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಹೋದರರ ಮೂಲಕ ವೆಂಕಟೇಶನನ್ನು ಸಂಡೂರು ತಾಲೂಕಿನ ನಾಗಲಾಪುರಕ್ಕೆ ಕರೆ ತಂದರು. ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಲ್ಲಾಡಳಿತದ ಕಾರ್ಯಕ್ಕೆ ವೆಂಕಟೇಶನ ಕುಟುಂಬ ಹಾಗೂ ಇಡೀ ಜಿಲ್ಲೆಯಲ್ಲಿಯೇ ಪ್ರಶಂಸೆ ವ್ಯಕ್ತವಾಗುತ್ತಿದೆ.
Comments are closed.