
ನಟ ಸಂಜಯ್ ದತ್ಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ವಿಚಾರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಶೀಘ್ರವೇ ಅಮೆರಿಕಕ್ಕೆ ತೆರಳಿ ಸಂಜಯ್ ದತ್ ಚಿಕಿತ್ಸೆ ಪಡೆಯಲಿದ್ದಾರಂತೆ. ವಿಚಿತ್ರ ಎಂದರೆ, ಅವರ ಕುಟುಂಬಕ್ಕೆ ಕ್ಯಾನ್ಸರ್ ಬಿಟ್ಟು ಬಿಡದೆ ಕಾಡುತ್ತಿದೆ.
ಸಂಜಯ್ ದತ್ಗೆ ಇತ್ತೀಚೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೋನಾ ನೆಗೆಟಿವ್ ಬಂದಿತ್ತು. ಆದರೆ, ಕ್ಯಾನ್ಸರ್ ಇರುವ ವಿಚಾರ ಖಚಿತವಾಗಿತ್ತು. ಈ ಬಗ್ಗೆ ಬಾಲಿವುಡ್ ಫಿಲ್ಮ್ ಟ್ರೇಡ್ ಪತ್ರಕರ್ತ ಕೋಮಲ್ ನಹ್ತಾ ಟ್ವೀಟ್ ಮಾಡಿದ್ದಾರೆ. ಸಂಜಯ್ ದತ್ಗೆ ಕೊರೋನಾ ಕಾಡುತ್ತಿಲ್ಲ. ಅವರಿಗೆ ಕಾಡುತ್ತಿರುವುದು ಕ್ಯಾನ್ಸರ್ ಎಂದು ಬರೆದುಕೊಂಡಿದ್ದಾರೆ.
ಸಂಜಯ್ ದತ್ ಕುಟುಂಬಕ್ಕೆ ಬರೋದಾದರೆ ಅವರ ತಾಯಿ ಹಾಗೂ ಮೊದಲ ಪತ್ನಿ ಕ್ಯಾನ್ಸರ್ನಿಂದಲೇ ಮೃತಪಟ್ಟಿದ್ದಾರೆ. ಹೌದು, ಸಂಜಯ್ ದತ್ ತಾಯಿ ನರ್ಗೀಸ್ ದತ್ ಕ್ಯಾನ್ಸರ್ಗೆ ಬಲಿಯಾಗಿದ್ದರು. ನರ್ಗೀಸ್ ಅವರಿಗೆ ಮೇಧೋಜ್ಜೀರಕ ಕ್ಯಾನ್ಸರ್ ಇತ್ತು. 1981ರಲ್ಲಿ ಅವರು ಮೃತಪಟ್ಟಿದ್ದರು. ಸಂಜಯ್ ದತ್ ಬಯೋಪಿಕ್ನಲ್ಲಿ ಈ ವಿಚಾರ ಉಲ್ಲೇಖ ಮಾಡಲಾಗಿದೆ.
ಇನ್ನು, ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ 1996ರಲ್ಲಿ ಕ್ಯಾನ್ಸರ್ನಿಂದ ನಿಧನರಾಗಿದ್ದರು. ಆಗೀನ್ನೂ ಅವರಿಗೆ ಕೇವಲ 32 ವರ್ಷ. ಈಗ ಸಂಜಯ್ ದತ್ಗೆ ಕ್ಯಾನ್ಸರ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ.
ಕುಸಿದು ಬಿದ್ದ ಸಂಜಯ್ ದತ್:
ಸಂಜಯ್ ದತ್ಗೆ ತಾಯಿಯನ್ನು ಕಳೆದುಕೊಂಡ ನೋವು ಇಂದಿಗೂ ಇದೆಯಂತೆ. ನರ್ಗೀಸ್ ಕ್ಯಾನ್ಸರ್ನಿಂದ ಮೃತಪಟ್ಟಿದ್ದು ಸಂಜಯ್ ದತ್ಗೆ ಸಾಕಷ್ಟು ಆತಂಕ ಕಾಡಿತ್ತು. ಆದರೆ, ಈಗ ಅವರಿಗೆ ಸ್ವತಃ ಕ್ಯಾನ್ಸರ್ ಕಾಣಿಸಿರುವುದು ಆಘಾತ ನೀಡಿದೆ. ಈ ವಿಚಾರ ಕೇಳಿ ಅವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ.
ಸಂಜಯ್ ದತ್ ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾನು ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜೊತೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ, ಎಂದು ಅವರು ಬರೆದುಕೊಂಡಿದ್ದಾರೆ.
Comments are closed.