
ಕೊಡಗು : ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಆಶ್ಲೇಷಾ ಮಳೆ ಬಿಟ್ಟೂ ಬಿಡದೆ ಆರ್ಭಟಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 154 ಮಿಲಿ ಮೀಟರ್ ಗೂ ಹೆಚ್ಚು ಮಳೆ ಸುರಿದಿದೆ. ಬಾಗಮಂಡಲ ಬ್ರಹ್ಮಗಿರಿ ತಪ್ಪಲು ತಲಕಾವೇರಿ ಸುತ್ತಮುತ್ತ ಭಾರೀ ಗಾಳಿ ಮಳೆಯಾಗುತ್ತಿದೆ. ಪರಿಣಾಮ ಬಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದ್ದು ಕಾವೇರಿ ಉಕ್ಕಿ ಹರಿದಿದೆ. ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಮಡಿಕೇರಿ ಬಾಗಮಂಡಲ, ಮಡಿಕೇರಿ ನಾಪೋಕು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮತ್ತೊಂದೆಡೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲಿನಲ್ಲಿ ಕಾವೇರಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹೀಗಾಗಿ ನಾಪೋಕ್ಲು ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಹಲವೆಡೆ ಕಾವೇರಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಅದೇ ನೀರಿನಲ್ಲಿ ವಾಹನ ಸವಾರರು ಪ್ರಯಾಸದಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ನಾಪೋಕ್ಲಿನ ಸರ್ಕಾರಿ ಹಳೇ ಶಾಲಾ ಕಟ್ಟಡ ಕುಸಿದು ಬಿದ್ದು ನೆಲಸಮವಾಗಿದೆ. ಬಾರಿ ಮಳೆಗೆ ಮಡಿಕೇರಿ ನಗರದ ಕಾವೇರಿ ಬಡಾವಣೆ ಜಲಾವೃತವಾಗಿದೆ. ನೀರಿನಲ್ಲಿ ಆಟೋ ಬೈಕ್ ಮತ್ತು ಕಾರುಗಳು ಸಿಲುಕಿದ್ದು, ಜನರು ಪರದಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಆಗಸ್ಟ್ ತಿಂಗಳು ಕೊಡಗಿಗೆ ಕಂಟಕ ತಂದೊಡ್ಡುವ ಎಲ್ಲಾ ಸಾಧ್ಯತೆಗಳಿವೆ ಒಟ್ಟಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಡಗು ತತ್ತರಗೊಳ್ಳುವಂತಾಗಿದೆ.
Comments are closed.