ಕರ್ನಾಟಕ

24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ನೂರು ಮಿ.ಮೀಟರ್​ಗೂ ಅಧಿಕ ಮಳೆ; 15 ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಕುಸಿತದ ಆತಂಕ

Pinterest LinkedIn Tumblr

24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ನೂರು ಮಿ.ಮೀಟರ್​ಗೂ ಅಧಿಕ ಮಳೆ; 15 ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಕುಸಿತದ ಆತಂ

ಕಳೆದ ಎರಡು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಕೊಡಗು ಜಿಲ್ಲೆಗೆ ಆಗಸ್ಟ್ ಎಂದರೆ ಕಂಟಕ ಎನ್ನುವ ಭಾವನೆ ಮೂಡಿಸಿದೆ. ಈ ಬಾರಿಯಾದರೂ ಯಾವುದೇ ಅನಾಹುತ ಸಂಭವಿಸದೆ ಇರಲಿ ಅನ್ನೋದು ಎಲ್ಲರ ಆಶಯವಾಗಿದೆ.

24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ನೂರು ಮಿ.ಮೀಟರ್​ಗೂ ಅಧಿಕ ಮಳೆ; 15 ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಕುಸಿತದ ಆತಂಕ

ಕೊಡಗು: ಕೊಡಗು ಜಿಲ್ಲೆಗೆ ಆಗಸ್ಟ್ ತಿಂಗಳು ಅಂದರೆ ಅದೇಕೊ  ಅಪಾಯ  ತಂದೊಡ್ಡುವ ತಿಂಗಳು ಎನ್ನುವಂತಾಗಿದೆ. ಕಳೆದ ಎರಡು ವರ್ಷಗಳಲ್ಲೂ ಇದೇ ಆಗಸ್ಟ್​ ತಿಂಗಳು ಹಲವು ಸಾವು-ನೋವುಗಳಿಗೆ ಸಾಕ್ಷಿಯಾಗಿತ್ತು. ಈ ವರ್ಷದವೂ ಮತ್ತದೇ ಸಂಕಷ್ಟಕ್ಕೆ ಆಗಸ್ಟ್ ತಿಂಗಳು ಸಾಕ್ಷಿ ಆಗುತ್ತಾ ಎಂಬ ಅನುಮಾನ ಮೂಡಿದೆ. ಕಳೆದ ಎರಡು ವರ್ಷವೂ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ನಲುಗಿ ಹೋಗಿತ್ತು. ಇದೀಗ ಆಷ್ಲೇಶ ಮಳೆ ಕೊಡಗಿಗೆ ಗಂಡಾಂತರ ತಂದೊಡ್ಡಿಬಿಡುತ್ತಾ ಎನ್ನೋ ಆತಂಕ ಮೂಡಿಸಿದೆ.

2018 ರ ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ರಣಭೀಕರ ಮಳೆಗೆ ಬರೋಬ್ಬರಿ 7 ಪಂಚಾಯಿತಿ ವ್ಯಾಪ್ತಿಯ 36ಕ್ಕೂ ಹೆಚ್ಚು ಹಳ್ಳಿಗಳ ಭೂ ಕುಸಿತವಾಗಿತ್ತು. ಇನ್ನು 2019ರಲ್ಲಿಯೂ ಆಗಸ್ಟ್​ನಲ್ಲಿ ಮಳೆ ನಿರೀಕ್ಷೆಗೂ ಮೀರಿ ಅಬ್ಬರಿಸಿತ್ತು. ಹೀಗಾಗಿ ಸೋಮವಾರಪೇಟೆ, ಮಡಿಕೇರಿ ಮತ್ತು ವಿರಾಜಪೇಟೆ ಮೂರು ತಾಲೂಕುಗಳು ಪ್ರವಾಹಕ್ಕೆ ಸಿಲುಕಿದ್ದವು.  ಜೊತೆಗೆ  ಮಡಿಕೇರಿ ತಾಲ್ಲೂಕಿನ ಕೋರಂಗಾಲ ಮತ್ತು ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ 19 ಜನರು ಸಾವನ್ನಪ್ಪಿದ್ದರು. ಈ ಎರಡು ವರ್ಷಗಳ ದುರಂತವನ್ನು ನೆನಪಿಸುವಂತೆ ಎರಡು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಹೊಲಗದ್ದೆಗಳೆಲ್ಲಾ ನೀರಿನಿಂದ ತುಂಬಿ ಹೊಳೆಯಂತಾಗಿವೆ. ಬಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದ್ದು, ಮುಳುಗಡೆಯಾಗುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 106.5 ಮಿಲಿ ಮೀಟರ್ ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನ ಬಲ್ಲಮಾವುಟಿ, ಬಾಗಮಂಡಲದಲ್ಲಿ 170 ಮಿಲಿ ಮೀಟರ್ ಮಳೆ ಸುರಿದಿದೆ. ಗಾಳಿಬೀಡು, ಗರ್ವಾಲೆ, ಕಿರಂಗದೂರು ಸೇರಿದಂತೆ 15 ಪಂಚಾಯಿತಿಗಳ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದ್ದು, ಈ ಪ್ರದೇಶದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಕಳೆದ ವರ್ಷದ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ, ಈ ವರ್ಷವೇ ಜಾಸ್ತಿ ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗೆ ಕಳೆದ ವರ್ಷಕ್ಕಿಂತ ಈ ವರ್ಷ ಈಗಾಗಲೇ 50 ಮಿ ಮೀಟರ್ ಜಾಸ್ತಿ ಮಳೆಯಾಗಿದೆ. ಕಳೆದ ಬಾರಿ ಜನವರಿಯಿಂದ ಆಗಸ್ಟ್ ತಿಂಗಳವರೆಗೆ 836 ಮಿ. ಮೀ. ಮಳೆ ಸುರಿದಿದ್ದರೆ, ಈ ಬಾರಿ 900 ಮಿ.ಮೀ. ಮಳೆಯಾಗಿದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವರುಣ ಗುಡುಗುಸಹಿತ ಎಡೆಬಿಡದೆ ಅಬ್ಬರಿಸುತ್ತಿದ್ದಾನೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ 4 ದಿನ 115 ಮೀ.ಮೀಟರ್ ನಿಂದ 204 ಮಿ.ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಹೀಗಾಗಿ ಕೊಡಗು ಜಿಲ್ಲಾಡಳಿತ 4 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದೇ ಅಂಶ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ಕಳೆದ ಎರಡು ಬಾರಿಯೀ ಆಗಸ್ಟ್ ತಿಂಗಳಿನಲ್ಲಿಯೇ ಭೂ ಕುಸಿತ ಮತ್ತು ಪ್ರವಾಹ ಸೃಷ್ಟಿಯಾಗಿತ್ತು. ಈ ವರ್ಷವೂ ಆಗಸ್ಟ್ ತಿಂಗಳಿನಲ್ಲಿ ಭಾರೀ ಮಳೆಯಾಗುತ್ತಿರುವುದು ಮತ್ತೆ ಅನಾಹುತ ಸಂಭವಿಸುವುದೋ ಏನೋ ಎಂಬ ಆತಂಕ ಮನೆ ಮಾಡಿದೆ.

Comments are closed.