
ಯಾದಗಿರಿ: ಕೋವಿಡ್ಗೆ ಜನ ಭಯಪಡುತ್ತಿದ್ದಾರೆ. ಆದರೆ, ಈ ಸೋಂಕಿಗೆ ಭಯ ಪಡುವ ಅಗತ್ಯವಿಲ್ಲ. ಸೂಕ್ತ ಮುಂಜಾಗ್ರತೆ ವಹಿಸುವುದು ಅಗತ್ಯವಷ್ಟೇ. ಯಾದಗಿರಿ ಜಿಲ್ಲೆಯಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗಿದ್ದು ಇದರಿಂದ ಆತಂಕ ಕಡಿಮೆಯಾದಂತಾಗಿದೆ.
ನಗರದ ನಿವಾಸಿ 92 ವರ್ಷದ ವೃದ್ದನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ನಂತರ ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ವೃದ್ಧ ಸ್ವಲ್ಪ ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆ ವೈದ್ಯರು ತಪಾಸಣೆ ಮಾಡಿ ಔಷಧಿಗಳನ್ನು ನೀಡಿದ್ದು, ಔಷಧಿ ಸೇವನೆಯಿಂದ ಗುಣಮುಖರಾಗಿ ಈಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
92 ವರ್ಷದ ತಂದೆಗೆ ಪುತ್ರನೇ ಮನೆಯಿಂದ ಗಂಜಿ ತೆಗೆದುಕೊಂಡು ಹೋಗಿ ಆರೈಕೆ ಕೂಡ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಏಳು ದಿನದಲ್ಲಿ ಹಿರಿಯ ವಯಸ್ಸಿನ ತಂದೆ ಗುಣಮುಖನಾಗಿದ್ದಕ್ಕೆ ಪುತ್ರನ ಮುಖದಲ್ಲಿ ಖುಷಿಯಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಗುಣಮುಖನಾದ ವೃದ್ಧನ ಪುತ್ರ ಮಾತನಾಡಿ, ಕೋವಿಡ್ ಬಂದಿದೆ ಎಂದು ಯಾರು ಭಯಗೊಳ್ಳಬಾರದು. ಅಗತ್ಯ ಮುಂಜಾಗ್ರತೆ ವಹಿಸಿ ಬಿಸಿ ನೀರು ಸೇವನೆ ಜೊತೆ ಆಯುಷ್ ಇಲಾಖೆ ಸೂಚಿಸಿರುವ ಆಯುರ್ವೇದ ಔಷಧಿಗಳನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ತಂದೆಯವರನ್ನು ಮುಂದಿನ ದಿನಗಳಲ್ಲಿ ಜೋಪಾನವಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 2333 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 1647 ಜನ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 582 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿದೆ. ಜನರು ಯಾವುದೇ ಭಯಗೊಳ್ಳದೆ ಎಚ್ಚರ ವಹಿಸಬೇಕಾಗಿದೆ.
Comments are closed.