
ಚಿಕ್ಕಮಗಳೂರು : ಅವರೆಲ್ಲ ಹೆಚ್ಚಿನ ಸಮಯವನ್ನು ಕಾಡಲ್ಲೇ ಕಳೆಯುವವರು. ಕೆಂಪು ಉಗ್ರರ ಬೇಟೆಗೆಂದೇ ಕಾಡಿನಂಚಿನಲ್ಲಿ ಕರ್ತವ್ಯ ನಿರ್ವಹಿಸುತ್ತ ಒಂದು ರೀತಿಯಾಗಿ ನಾಡಿನ ಸಂಪರ್ಕವನ್ನೇ ಬಿಟ್ಟವರು. ಮಳೆಯಿರಲಿ, ಬಿಸಿಲಿರಲಿ, ಚಳಿಯಿರಲಿ, ಯಾವುದಕ್ಕೂ ವಿಚಲಿತರಾಗದೇ ಕಾಡಿನ ಸರಹದ್ದಿನಲ್ಲೇ ಅವರ ಕೆಲಸ. ಸದ್ಯ ಎಲ್ಲಾ ಕಡೆ ಎಂಟ್ರಿಯಾಗುತ್ತಿರುವ ಕೊರೊನಾ ಇವರನ್ನು ಮುಟ್ಟಲು ಸಾಧ್ಯವೇ ಇಲ್ಲ ಅಂತ ಭಾವಿಸಲಾಗಿತ್ತು. ಆದರೆ, ಆ ಕ್ರೂರಿ ಕೊರೊನಾ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗಳನ್ನೂ ಬಿಟ್ಟಿಲ್ಲ!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅನೇಕ ವರ್ಷಗಳಿಂದ ನಕ್ಸಲರನ್ನ ನಿಯಂತ್ರಿಸಲು ಎಎನ್ಎಫ್ ಕ್ಯಾಂಪ್ ಹಾಕಿ ಕಾರ್ಯಾಚರಣೆ ಮಾಡುತ್ತಿದೆ. ಈ ಭಾಗದಲ್ಲಿ ಆಗಾಗ ನಕ್ಸಲರು ಗುಟುರು ಕೇಳಿ ಬರುತ್ತಿರುವುದರಂದ ಸದಾ ಎಚ್ಚರಿಕೆಯಿಂದ ಆ್ಯಂಟಿ ನಕ್ಸಲ್ ಫೋರ್ಸ್ ಕೆಲಸ ನಿರ್ವಹಿಸುತ್ತಿದೆ. ಹೀಗೆ ಕಾಡಂಚಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳನ್ನು ಕೂಡ ಕೊರೊನಾ ಟಚ್ ಮಾಡಿದೆ.
ಶೃಂಗೇರಿ ತಾಲೂಕಿನ ಚಿಕ್ಕಮಗಳೂರು ಗಡಿಭಾಗವಾಗಿರುವ ಕೆರೆಕಟ್ಟೆಯ ಬರೋಬ್ಬರಿ 10 ಮಂದಿ ಎಎನ್ಎಫ್ ಸಿಬ್ಬಂದಿಗೂ ಇದೀಗ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಸೋಂಕು ತಗುಲಿರುವ ವಿಚಾರ ಗೊತ್ತಾಗ್ತಲೇ ಕ್ಯಾಂಪ್ ನ ಎಎನ್ ಎಫ್ ಸಿಬ್ಬಂದಿಗಳಿಗೆಲ್ಲಾ ಶಾಕ್ ಆಗಿದ್ದು, ಸದ್ಯ ಸೋಂಕು ತಗುಲಿರುವ ಸಿಬ್ಬಂದಿಗಳನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 10 ಮಂದಿಗೆ ಪಾಸಿಟಿವ್ ಬಂದಿರೋದ್ರಿಂದ ಜೊತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇತರ ಎಎನ್ ಎಫ್ ಸಿಬ್ಬಂದಿಗಳಿಗೂ ಆತಂಕ ಶುರುವಾಗಿದೆ. ಒಂದೆಡೆ 10 ಮಂದಿ ಎಎನ್ ಎಫ್ ಸಿಬ್ಬಂದಿಗಳಿಗೆ ಸೋಂಕು ತಗುಲಿರೋದು ಹೇಗೆ ಅನ್ನೋ ಅನುಮಾನ ಮೂಡಿದೆ. ಇನ್ನೊಂದೆಡೆ ಸದ್ಯ ಸೋಂಕಿತರಾಗಿರೋ ಸಿಬ್ಬಂದಿಗಳ ಒಟ್ಟಿಗೆ ಕೆಲಸ ಮಾಡ್ತಿದ್ದ ಇತರ ಸಿಬ್ಬಂದಿಗಳ ಟೆಸ್ಟ್ ಕೂಡ ನಡೆಸಲಾಗುತ್ತಿದೆ.
ನಿನ್ನೆ ಒಂದೇ ದಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ 68 ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ 10 ಮಂದಿ ಸಾವನ್ನಪ್ಪಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 402ಕ್ಕೆ ಏರಿದೆ. ಇನ್ನೂ ಶೃಂಗೇರಿ ತಾಲೂಕಿನಲ್ಲೂ ದಿನೇ ದಿನೇ ಪಾಸಿಟಿವ್ ಸಂಖ್ಯೆ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಕೆರೆಕಟ್ಟೆಯ ಕಾಡಂಚಿನಲ್ಲಿ ಕರ್ತವ್ಯ ನಿರ್ವಹಿಸ್ತಿರೋ ಸಿಬ್ಬಂದಿಗಳ್ಯಾರಿಗೂ ಕೂಡ ಹೊರ ಜಗತ್ತಿನ ಸಂಪರ್ಕವಿರಲಿಲ್ಲ. ಆದ್ರೂ ಕೂಡ ಕ್ರೂರಿ ಕೊರೊನಾ ಎಎನ್ ಎಫ್ ಸಿಬ್ಬಂದಿಗಳ ದೇಹ ಹೊಕ್ಕಿದಾದರೂ ಹೇಗೆ ಅನ್ನೋ ಪ್ರಶ್ನೆ ಮೂಡಿದೆ.
Comments are closed.