ಮಂಗಳೂರು ಜುಲೈ 03: ಜೂನ್ 25ರಂದು ಆರಂಭಗೊಂಡಿದ್ದ ಎಸ್.ಎಸ್.ಎಲ್.ಸಿ. .ಸಿ ಪರೀಕ್ಷೆ ಶುಕ್ರವಾರ ಕೊನೆಗೊಂಡಿದ್ದು, ಕೊರೋನಾ ಭೀತಿಯ ನಡುವೆಯೇ ಎಸ್.ಎಸ್.ಎಲ್.ಸಿ. .ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ. ಇದರಿಂದ ಕೊರೋನಾ ಸೋಂಕಿನ ಆತಂಕದಲ್ಲಿದ್ದ ಪೋಷಕರು ನಿಟ್ಟಿಸಿರು ಬಿಟ್ಟಿದ್ದಾರೆ.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯು ಪರೀಕ್ಷೆ ಆರಂಭದಿಂದಲೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹಲವು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೇವಲ 20 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಝೇಶನ್ ಮಾಡಲಾಗಿತ್ತು.
ಪ್ರತೀ ಪರೀಕ್ಷೆ ಮುಗಿದ ತಕ್ಷಣ ಮತ್ತೊಮ್ಮೆ ಸ್ಯಾನಿಟೈಝೇಶನ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಮಾಸ್ಕ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರ ಪ್ರವೇಶಿಸುವ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಲು ಎಲ್ಲೆಡೆ ಥರ್ಮಲ್ ಸ್ಕ್ಯಾನರ್ ಗಳನ್ನು ಅಳವಡಿಸಲಾಗಿತ್ತು.
ಇಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದರೂ ಕೊರೋನಾ ಸೋಂಕಿನ ಭೀತಿಯಲ್ಲಿದ್ದ ವಿದ್ಯಾರ್ಥಿಗಳು ಭಯದಿಂದಲೇ ತಮ್ಮ ಭವಿಷ್ಯ ನಿರ್ಧರಿಸುವ ಅಗ್ನಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದರು.
ಶುಕ್ರವಾರ ಅಂತಿಮಗೊಂಡ (ತೃತೀಯ ಭಾಷೆ) ಹಿಂದಿ ಪರೀಕ್ಷೆಗೆ 27,448 ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ (ನೊಂದಣಿ) ಮಾಡಿದ್ದು, ಒಟ್ಟು 27,155 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 293 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಹಾಜರಾದವರಲ್ಲಿ ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 49, ನೆರೆ ರಾಜ್ಯಗಳಿಂದ ಒಟ್ಟು 367 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.




Comments are closed.