
ನವದೆಹಲಿ: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೇಲಿನ ಸಂಶೋಧನೆ ಮುಂದುವರೆದಿದ್ದು, ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವಾಗುವುದೂ ಕೂಡ ಕೋವಿಡ್-19 ಸೋಂಕಿನ ಲಕ್ಷಣವಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್ ಲಕ್ಷಣಗಳ ಪಟ್ಟಿಗೆ ಈ ಅಂಶವನ್ನೂ ಶನಿವಾರ ಸೇರಿಸಲಾಗಿದೆ. ಕೋವಿಡ್–19ಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳು, ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳ ಜೊತೆಗೆ ವಾಸನೆ ಹಾಗೂ ರುಚಿ ಗ್ರಹಣ ನಷ್ಟವಾಗಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ’ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಅಂತೆಯೇ ಕೊರೋನಾ ಸೋಂಕಿತ ವ್ಯಕ್ತಿ ಸೀನುವುದರಿಂದ, ಕೆಮ್ಮುವಾಗ ಅಥವಾ ಮಾತನಾಡುವಾಗ ಹೊರ ಬರುವ ದ್ರವಾಂಶ (ಡ್ರಾಪ್ ಲೆಟ್ಸ್)ಗಳಿಂದಲೇ ಹೆಚ್ಚಾಗಿ ಸೋಂಕು ವ್ಯಾಪಿಸುವ ಸಾಧ್ಯತೆ ಇದ್ದು, ಈ ಡ್ರಾಪ್ ಲೇಟ್ ಗಳಿಲ್ಲಿನ ವೈರಸ್ ಪರಿಸರದಲ್ಲಿ ಹೆಚ್ಚು ಹೊತ್ತು ಇರಲಿದೆ. ಅಲ್ಲದೆ ಸೋಂಕಿತ ವ್ತಕ್ತಿ ದೈಹಿಕ ಸ್ಪರ್ಶ, ಸೋಂಕಿತ ಮುಟ್ಟಿದ ವಸ್ತುಗಳ ಸ್ಪರ್ಶದಿಂದ ಕೂಡ ವೈರಸ್ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.
ಈ ವೈರಸ್ ಎಲ್ಲ ವಯಸ್ಸಿನವರ ಮೇಲೆ ದುಷ್ಪರಿಣಾಮ ಬೀರಿದೆಯಾದರೂ, ಪ್ರಮುಖವಾಗಿ 60 ವರ್ಷ ಮೇಲ್ಪಟ್ಟ ಹಿರಿಯರಲ್ಲಿ ಇದರ ಪರಿಣಾಮ ಹೆಚ್ಚು. ಅವರಲ್ಲಿ ರೋಗನಿರೋಧಕ ಸಾಮರ್ಥ್ಯ ಕಡಿಮೆ ಇರುವುದರಿಂದಲೇ ವೈರಸ್ ಅವರಿಗೆ ಮಾರಣಾಂತಿಕವಾಗಬಲ್ಲದು ಎಂದು ಹೇಳಲಾಗಿದೆ.
Comments are closed.