ಮನೋರಂಜನೆ

ಜೂ.1ರಿಂದ ಗಟ್ಟಿಮೇಳ, ಪಾರು, ಜೊತೆ ಜೊತೆಯಲಿ ಮುಂತಾದ ಸೀರಿಯಲ್‌ಗಳು ಆರಂಭ!

Pinterest LinkedIn Tumblr


ಇಷ್ಟು ದಿನ ಧಾರಾವಾಹಿಗಳನ್ನು ಮಿಸ್‌ ಮಾಡಿಕೊಂಡಿದ್ದವರಿಗೆ ಅಂತೂ ಇಂತೂ ಈಗ ಸಿಹಿ ಸುದ್ದಿ ಸಿಕ್ಕಿದೆ. ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಹೊಸ ಸಂಚಿಕೆಗಳನ್ನು ಪ್ರಸಾರ ಮಾಡಲು ಮನರಂಜನಾ ವಾಹಿನಿಗಳು ಸಜ್ಜಾಗಿವೆ. ಅದರಲ್ಲೂ ಜೀ಼ ಕನ್ನಡ ವಾಹಿನಿಯು ಜೂನ್‌ 1ರಿಂದಲೇ ತನ್ನ ಫೇಮಸ್‌ ಸೀರಿಯಲ್‌ಗಳನ್ನು ಬಿತ್ತರಿಸಲು ಪ್ಲ್ಯಾನ್‌ ಮಾಡಿಕೊಂಡಿದೆ.

ಕರ್ನಾಟಕದಲ್ಲಿ ಜೀ಼ ಕನ್ನಡ ಚಾನಲ್‌ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದೆ. “ಬಯಸಿದ ಬಾಗಿಲು ತೆಗೆಯೋಣ” ಎಂಬ ಟ್ಯಾಗ್ ಲೈನ್ ಮೂಲಕ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ. ಲಾಕ್‌ಡೌನ್‌ ಕಾರಣದಿಂದ ಹಲವು ಸಮಸ್ಯೆಗಳು ಎದುರಾದ ಕಾರಣ ಎಲ್ಲ ಸೀರಿಯಲ್‌ಗಳ ಪ್ರಸಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಅವುಗಳ ಪುನಾರಂಭಕ್ಕೆ ದಿನಾಂಕ ನಿಗದಿ ಆಗಿದೆ.

ರಾಜ್ಯ ಸರ್ಕಾರವು ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಧಾರಾವಾಹಿಗಳ ಚಿತ್ರೀಕರಣ ಮತ್ತೆ ಪ್ರಾರಂಭಗೊಂಡಿದ್ದು ಜೂನ್ 1ರಿಂದ ವೀಕ್ಷಕರು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ವೀಕ್ಷಿಸಬಹುದಾಗಿದೆ.
ವಿಶೇಷ ಏನೆಂದರೆ, ಈಗ ಪ್ರಸಾರವಾಗಲಿರುವ ಧಾರಾವಾಹಿಗಳಲ್ಲಿ ಕೆಲವು ಬದಲಾವಣೆಗಳಾಗಿವೆ!

‘ರಾಧಾ ಕಲ್ಯಾಣ’ ಮತ್ತು ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಗಳ ಪ್ರಸಾರ ಇರುವುದಿಲ್ಲ. ಇದರಿಂದ ಆ ಧಾರಾವಾಹಿಗಳನ್ನು ಇಷ್ಟಪಡುತ್ತಿದ್ದ ಪ್ರೇಕ್ಷಕರಿಗೆ ಸಹಜವಾಗಿಯೇ ನಿರಾಸೆ ಆಗಿದೆ. ಉಳಿದ ಧಾರಾವಾಹಿಗಳ ಪ್ರಸಾರದ ವೇಳಾ ಪಟ್ಟಿ ಕೂಡ ಈಗ ಲಭ್ಯವಾಗಿದೆ. ಸಂಜೆ 6.30ಕ್ಕೆ ಮಾಲ್ಗುಡಿ ಡೇಸ್, 7 ಗಂಟೆಗೆ ಕಮಲಿ, ರಾತ್ರಿ 7.30ಕ್ಕೆ ಪಾರು, ರಾತ್ರಿ 8ಕ್ಕೆ ಗಟ್ಟಿಮೇಳ, 8.30ಕ್ಕೆ ಜೊತೆ ಜೊತೆಯಲಿ, ರಾತ್ರಿ 9ಕ್ಕೆ ನಾಗಿಣಿ 2, ರಾತ್ರಿ 9.30ಕ್ಕೆ ಯಾರೇ ನೀ ಮೋಹಿನಿ ಹಾಗೂ ರಾತ್ರಿ 10 ಗಂಟೆಗೆ ಬ್ರಹ್ಮಗಂಟು ಧಾರಾವಾಹಿಗಳು ಪ್ರಸಾರವಾಗಲಿವೆ.

ಕೊರೊನಾ ವೈರಸ್‌ ಹಾವಳಿ ಇನ್ನೂ ಪೂರ್ತಿಯಾಗಿ ಕಡಿಮೆ ಆಗಿಲ್ಲ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರ ನಡುವೆಯೂ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆ. ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್‌ ಮಾಡಲಾಗುತ್ತಿದೆ. ಇಷ್ಟು ದಿನ ಮರು ಪ್ರಸಾರದ ಸಂಚಿಕೆಗಳನ್ನು ನೋಡುತ್ತಿದ್ದ ಪ್ರೇಕ್ಷಕರು ಜೂ.1ರಿಂದ ಹೊಸ ಎಪಿಸೋಡ್‌ಗಳನ್ನು ವೀಕ್ಷಿಸಲಿದ್ದಾರೆ.

Comments are closed.