ಕರಾವಳಿ

ಭಾರತೀ ವಿಷ್ಣುವರ್ಧನ್ ಅವರ ಬಗ್ಗೆ ನಿಮಗೆಷ್ಟು ಗೊತ್ತು : ಅಪರೂಪದ ಚಿತ್ರದೊಂದಿಗೆ ಇಲ್ಲಿದೆ ಮಾಹಿತಿ

Pinterest LinkedIn Tumblr

ಖ್ಯಾತ ನಟಿ ತಾರಾ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡ ಈ ವಿಶೇಷ ಅಥಿತಿಗಳ ಬಹು ಅಪರೂಪದ ಚಿತ್ರ

ಮಂಗಳೂರು, ಮೇ. 25 : ಕನ್ನಡದ ಖ್ಯಾತ ನಟಿ, ರಾಜಕಾರಣಿಯೂ ಆಗಿರುವ ತಾರಾ (ಅನುರಾಧಾ) ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡ ಈ ವಿಶೇಷ ಅಥಿತಿಗಳ ಅಪರೂಪದ (EXCLUSIVE) ಚಿತ್ರ ಹಾಗೂ ಚಿತ್ರದಲ್ಲಿರುವರ (ದಿನಕೊಬ್ಬರ) ಬಗ್ಗೆ ಮಾಹಿತಿಯನ್ನು ನಮ್ಮ ಸಿನಿ ಪ್ರೇಮಿಗಳಿಗೆ ಹಾಗೂ ನಮ್ಮೆಲ್ಲ ಓದುಗರಿಗಾಗಿ ಕನ್ನಡಿಗ ವರ್ಲ್ಡ್ ನೀಡುತ್ತಿದ್ದು, ಇಂದು ಬಹು ಭಾಷಾ ಕಲಾವಿದೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

{ ಚಿತ್ರದಲ್ಲಿ ಕುಳಿತವರು, ಎಡದಿಂದ ಬಲಕ್ಕೆ, ಹಿರಿಯ ಹಾಗೂ ಪ್ರಸಿದ್ಧ ನಟಿಯರಾದ ಭಾರತೀ ವಿಷ್ಣುವರ್ಧನ್ (ಸಾಹಸ ಸಿಂಹ ವಿಷ್ಣುವರ್ಧನ್ ಪತ್ನಿ), ಬಹುಭಾಷ ನಟಿ ವಿನಯ ಪ್ರಸಾದ್, ಕನ್ನಡ ಸಿನಿಮಾದ ಜೊತೆಗೆ ತೆಲುಗು, ತಮಿಳಿನಲ್ಲೂ ಖ್ಯಾತರಾಗಿರುವ ಸುಮಿತ್ರ, ಶೈಲಾಶ್ರೀ (ಹಿರಿಯ ನಟ ಸುದರ್ಶನ್ ಅವರ ಧರ್ಮಪತ್ನಿ), ತಮ್ಮ ಮನೋಜ್ಞನ ಅಭಿನಯದ ಮೂಲಕ ಸಿನಿಪ್ರೇಕ್ಷಕರ ಕಣ್ಣಲ್ಲೂ ನೀರು ಭರಿಸುವಲ್ಲಿ ಯಶಸ್ವಿಯಾಗಿರುವ ಖ್ಯಾತ ಪೋಷಕ ನಟಿ ಸರೋಜ ದೇವಿ, ಕೆಲವೊಮ್ಮೆ ಉತ್ತಮ ಗೃಹಿಣಿಯ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದರೆ, ಮತ್ತೆ ಕೆಲವು ಚಿತ್ರದಲ್ಲಿ ವಿಲನ್ ರೀತಿಯ ಅಭಿನಯದಿಂದ ಖ್ಯಾತರಾಗಿರುವ ಹೇಮಚೌದರಿ ಹಾಗೂ ಮಜಾ ವಿಥ್ ಸೃಜಾ ಖ್ಯಾತಿಯ ಸೃಜನ್ ಲೋಕೇಶ್ ತಾಯಿ ಹಾಗೂ ದಿವಂಗತ ಖ್ಯಾತ ನಟ ಲೋಕೇಶ್ ಅವರ ಪತ್ನಿ ಖ್ಯಾತ ಪೋಷಕ ನಟಿ ಗಿರೀಜಾ ಲೋಕೇಶ್.

ಇನ್ನು ನಿಂತಿರುವವರು, ಎಡದಿಂದ ಬಲಕ್ಕೆ, ಕೀರ್ತಿ ವಿಷ್ಣುವರ್ಧನ್ ( ದಿ.ಡಾ.ವಿಷ್ಣುವರ್ಧನ್ ಮಗಳು), ಸ್ಪರ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರೇಖಾ, ಚಾರ್ಲಿ ಚಾಪ್ಲಿನ್ ನನ್ನು ನೆನಪಿಸುವ ನಟ, ಒಂದು ಕಾಲದ ಖ್ಯಾತ ಹಾಸ್ಯ ನಟ ದಿ.ನರಸಿಂಹ ರಾಜು ಅವರ ಪುತ್ರಿ ಪೊಷಕ ನಟಿ ಸುಧಾ ನರಸಿಂಹ ರಾಜು, ನಟಿಯಾಗಿ ಚಿತ್ರರಂಗ ಪ್ರವೇಶಿಸಿ ಬಳಿಕ ನಾಯಕಿ ನಟಿಯಾಗಿ ತದನಂತರ ಪೋಷಕ ನಟಿಯಾಗಿ, ಜೊತೆಜೊತೆಗೆ ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಮಜಲುಗಳನ್ನು ದಾಟಿ ಬಂದಿರುವ ಖ್ಯಾತ ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯ ಲಕ್ಶ್ಮೀ ಸಿಂಗ್ ( ಕನ್ನಡದ ನಾಯಕ ನಟ ಹಾಗೂ ಖ್ಯಾತ ಪೋಷಕ ನಟ ಜೈಜಗದೀಶ್ ಪತ್ನಿ ), ನಾಯಕಿ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಬಳಿಕ ಅಕ್ಕ,ತಂಗಿಯ ಪಾತ್ರದಲ್ಲೇ ಬಹಳಷ್ಟು ಮಿಂಚಿರುವ ಖ್ಯಾತ ನಟಿ ಬರ್ತ್‌ಡೇ ಗರ್ಲ್ ತಾರಾ ಅಲಿಯಾಸ್ ಅನುರಾಧ, ಬಾಲ್ಯನಟಿಯಾಗಿ ಚಿತ್ರರಂಗ ಪ್ರವೇಶಿಸಿ ಬಳಿಕ ನಟಿಯಾಗಿ ಕನ್ನಡ ಚಿತ್ರರಂಗದ ಹಲವಾರು ದಿಗ್ಗಜ್ಜರ ಜೊತೆ ನಟಿಸುವ ಮೂಲಕ ಖ್ಯಾತಿ ಪಡೆದ ಒಂದು ಕಾಲದ ರಾಣಿ, ಸುಧಾರಾಣಿ, ಅಳುವನ್ನೆ ಬಂಡವಾಳನ್ನಾಗಿಸಿಕೊಂಡು ಶೃತಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅಳುಮುಂಜಿ ಪ್ರಿಯದರ್ಶಿನಿ ಬಳಿಕ ಶೃತಿಯಾಗಿ ಬದಲಾದ ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಕನ್ನಡ ಚಿತ್ರರಂಗದ ಪ್ರಧಾನ ನಟಿಯರಲ್ಲೊಬ್ಬರಾಗಿ, ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತ ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ, ರೌಡಿಗಳ ಅಟ್ಟಹಾಸಕ್ಕೆ ಬಲಿಯಾಗಲೆಂದೆ ಮೀಸಲಾಗಿಟ್ಟವರಂತೆ, ಅಂತಹ ಪಾತ್ರಗಳೇ ಹೆಚ್ಚಾಗಿ ಲಭಿಸಿದರೂ ಕೊಟ್ಟಂತಹ ಪಾತ್ರಕ್ಕೆ ಜೀವ ತುಂಬುತ್ತಿದ್ದ ಖ್ಯಾತ ಪೋಷಕ ನಟಿ ತ್ರಿವೇಣಿ, ಹೆಚ್ಚು ಚಿತ್ರಗಳಲ್ಲಿ ನಟಿಸದಿದ್ದರೂ ತಮ್ಮ ಫ್ಯಾಮಿಲ್ ಬ್ಯಾಕ್ ರೌಂಡ್ ಹಿನ್ನೆಲೆ ಹಾಗೂ ತಮ್ಮ ನಟನಾ ಕೌಶಲ್ಯದಿಂದ ಬೆರಳೆಣಿಕೆಯ ಚಿತ್ರದಲ್ಲಿ ನಟಿಸಿದರೂ ಚಿತ್ರರಂಗದಲ್ಲಿ ನೆನೆಪಿಸುವ ವ್ಯಕ್ತಿತ್ವ ಹೊಂದಿರುವ ಪೂಜಾ ಲೋಕೇಶ್ ಹಾಗೂ ಕನ್ನಡದಲ್ಲಿ ಅಳುಮುಂಜಿ, ಗಂಡುಬೀರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಜೀವ ತುಂಬಿರುವ ಅನುಪ್ರಭಾಕರ್.}

ಬಹು ಭಾಷಾ ಕಲಾವಿದೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಬಗ್ಗೆ ಒಂದಿಷ್ಟು ಮಾಹಿತಿ :

ಬಹು ಭಾಷಾ ಕಲಾವಿದೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರುಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು. (ಜನ್ಮದಿನ : 15 ಅಗಸ್ಟ್ 1950) ಭಾರತಿಯವರ ಮಾತೃಭಾಷೆ ಮರಾಠಿ . 1966ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ ‘ದುಡ್ಡೇ ದೊಡ್ಡಪ್ಪ’ ಇವರ ಬಿಡುಗಡೆಗೊಂಡ ಮೊದಲ ಚಿತ್ರ. ನಟಿ, ಗಾಯಕಿ, ಸಹ ನಿರ್ದೇಶಕಿ, ಅಂಕಣಗಾರ್ತಿಯೂ ಆಗಿರುವ ಭಾರತಿ ವಿಷ್ಣುವರ್ಧನ್ ಅವರು ೨೦೦ಕ್ಕೂ ಹೆಚ್ಚು ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಇವರ ಚಿತ್ರಗಳು ಯಶಸ್ಸು ಕಂಡಿವೆ. ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನ, ರಾಕೇಶ್ ರೋಶನ್, ಮೆಹಮೂದ್ ; ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಎನ್. ಟಿ. ಆರ್, ಕೃಷ್ಣ, ಶೋಬನ್ ಬಾಬು, ಕೃಷ್ಣಂ ರಾಜು, ಕಾಂತಾರಾವ್ ; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ ಗಣೀಶನ್, ಜೆಮಿನಿ ಗಣೀಶನ್, ಮುತ್ತುರಾಮನ್, ಜೈಶಂಕರ್, ರವಿಚಂದ್ರನ್, ಎ.ವಿ.ಎಮ್. ರಾಜನ್ ಮುಂತಾದ ನಟರೊಂದಿಗೆ ನಟಿಸಿದ್ದಾರೆ. ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಕ್ರೀಡಾಪಟುವೂ ಆಗಿದ್ದರು.

ಕನ್ನಡ ಚಿತ್ರರಂಗದಲ್ಲಿ ‘ಗಂಗೆ ಗೌರಿ’, ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.

‘ನಾಗರಹಾವು’ ಚಿತ್ರದಿಂದ ಕನ್ನಡದಲ್ಲೊಂದು ಅಪೂರ್ವ ಪ್ರತಿಭೆಯಾಗಿ ಬೆಳಗಿದ ವಿಷ್ಣುವರ್ಧನ್ ಅವರನ್ನು ವರಿಸಿದ ಭಾರತಿಯವರು ಮುಂದೆ ವಿಷ್ಣುವರ್ಧನ್ ಅವರ ಯಶಸ್ಸಿನ ಹಾದಿಯಲ್ಲಿ ನೆರಳಿನಂತೆ ನಡೆದರು. ಅಷ್ಟೊಂದು ಸಾಧಿಸಿದ್ದರೂ ಸರಳತೆ, ಸಹೃದಯತೆಗಳಿಗೆ ಹೆಸರಾದವರು ಭಾರತಿ ವಿಷ್ಣುವರ್ಧನ್.

ಶೀಘ್ರದಲ್ಲೇ ಬರಲಿದೆ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’

ಆರು ಭಾಷೆಗಳಲ್ಲಿನಟಿಸಿ ಹೆಸರು ಮಾಡಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರ ವೈಯಕ್ತಿಕ ಬದುಕು ಹಾಗೂ ಚಿತ್ರ ಜೀವನವನ್ನು ಮುಖ್ಯವಾಗಿ ಇಟ್ಟುಕೊಂಡು ಸಾಕ್ಷ್ಯಚಿತ್ರವೊಂದು ತಯಾರಾಗುತ್ತಿದೆ. ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ನಟಿ ಭಾರತಿ ವಿಷ್ಣುವರ್ಧನ್‌ ಅವರ ಜೀವನಚರಿತ್ರೆ ಸಾಕ್ಷ್ಯಚಿತ್ರವಾಗಿ ತೆರೆಮೇಲೆ ಬರಲಿದ್ದು, ಅದನ್ನು ಅವರ ಅಳಿಯ ಅನಿರುದ್ಧ ನಿರ್ದೇಶನ ಮಾಡುತ್ತಿದ್ದು, ಅದಕ್ಕೆ ‘ಬಾಳೇ ಬಂಗಾರ’ ಎಂದು ಹೆಸರಿಡಲಾಗಿದೆ.

‘ಸಿನಿಮಾರಂಗದಲ್ಲಿನ ಅವರ ಪಯಣ, ವಿಷ್ಣುವರ್ಧನ್‌ ಅವರ ಜತೆಗಿನ ಜೀವನ, ಮಕ್ಕಳು, ಮೊಮ್ಮಕ್ಕಳು, ಅವರು ಮಾಡಿದ ಸಮಾಜಸೇವೆ, ಸ್ಮಾರಕಕ್ಕೋಸ್ಕರ ಅವರು ಮಾಡಿದ ಹೋರಾಟಗಳು.. ಹೀಗೆ ಭಾರತಿ ಅಮ್ಮನವರ ಜೀವನದ ವಿವಿಧ ಮಜಲುಗಳನ್ನು ಒಟ್ಟು ಎರಡು ಗಂಟೆ 18 ನಿಮಿಷಗಳಲ್ಲಿ ಕಟ್ಟಿಕೊಡುವ ಪ್ರಯತ್ನವನ್ನುಅನಿರುದ್ಧ ಅವರು ಸಾಕ್ಷ್ಯಚಿತ್ರದ ಮೂಲಕ ಮಾಡಿದ್ದಾರೆ.

ಈ ಸಾಕ್ಷ್ಯಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್‌ ಅವರ ಖ್ಯಾತ ಚಿತ್ರಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಇದುವರೆಗೂ ಯಾರೂ ನೋಡದ ಒಂದಷ್ಟು ಫೋಟೋಗಳು ಸಹ ಈ ಸಾಕ್ಷ್ಯಚಿತ್ರದಲ್ಲಿ ಇರಲಿದ್ದು, ಗುರುಕಿರಣ್‌ ಇದಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಭಾರತಿಯವರ ಅವರ ಅಣ್ಣ, ತಮ್ಮ, ತಂಗಿ, ಸ್ನೇಹಿತರು, ಕಾಲೇಜು ಪ್ರಾಂಶುಪಾಲರು ಹೀಗೆ ಭಾರತಿ ವಿಷ್ಣುವರ್ಧನ್‌ ಅವರ ಒಟ್ಟು ಬದುಕನ್ನು ಸೆರೆಹಿಡಿಯಲಾಗಿದ್ದು, ನಿರ್ದೇಶನದ ಜತೆಗೆ ಸ್ಕ್ರಿಪ್ಟ್‌ ಮತ್ತು ನಿರೂಪಣೆಯೂ ಅನಿರುದ್ಧ ಅವರದ್ದೇ.

ಲಾಕ್‌ಡೌನ್‌ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಈ ಸಾಕ್ಷ್ಯಚಿತ್ರ ರಿಲೀಸ್‌ ಆಗಬೇಕಿತ್ತಂತೆ. ಇದನ್ನು ಆನ್‌ಲೈನ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗೆ ನೀಡುವ ಆಲೋಚನೆಯಲ್ಲಿದ್ದಾರೆ ಅನಿರುದ್ಧ. ಸದ್ಯದಲ್ಲೇ ಭಾರತಿ ವಿಷ್ಣುವರ್ಧನ್‌ ಮತ್ತು ವಿಷ್ಣುವರ್ಧನ್‌ ಅಭಿಮಾನಿಗಳು ‘ಬಾಳೇ ಬಂಗಾರ’ವನ್ನು ನೋಡಬಹುದು.

ಪ್ರಶಸ್ತಿಗಳು :

ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ.
1917ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ.

ನಮ್ಮ ಓದುಗರಿಗಾಗಿ ಈ ಚಿತ್ರದಲ್ಲಿರುವ ನಟಿಯರಲ್ಲಿ ದಿನಾ ಒಬ್ಬರ ಬಗ್ಗೆ ಪ್ರತೀ ದಿನ ಮಾಹಿತಿ ಪ್ರಕಟವಾಗಲಿದೆ. ನಾಳೆ ಯಾರ ಬಗ್ಗೆ.. ನಿರೀಕ್ಷಿಸಿ..

ವರದಿ : ಸತೀಶ್ ಕಾಪಿಕಾಡ್

Comments are closed.