
ಲಂಡನ್: ಕೊರೋನಾ ವೈರಸ್ ಸೋಂಕು ಎಗ್ಗಿಲ್ಲದೆ ಹರಡುತ್ತಿರುವುದು ನಿಜ. ಅಮೆರಿಕದಲ್ಲಂತೂ ಇದು ಮಾರಣಹೋಮವನ್ನೇ ನಡಸುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಗರಿಷ್ಠಕ್ಕೇರುತ್ತಲೇ ಇದೆ. ಜಗತ್ತಿನ ಬಹುತೇಕ ದೇಶಗಳು ಲಾಕ್ಡೌನ್ ಮೊರೆ ಹೋಗಿವೆ. ಆದರೆ, ಎಷ್ಟು ದಿನ ಲಾಕ್ ಡೌನ್ ಮಾಡಬೇಕೆಂಬುದೇ ಎಲ್ಲರಿಗೂ ತಲೆಕೆಟ್ಟಿರುವ ಅಂಶ. ಬ್ರಿಟನ್ ವಿಜ್ಞಾನಿಗಳು ಇದಕ್ಕೊಂದು ಸ್ಪಷ್ಟತೆ ಕೊಟ್ಟಿದ್ಧಾರೆ. ಲಾಕ್ಡೌನ್ಗಾಗಿ 50-30 ಸೂತ್ರ ಮುಂದಿಟ್ಟಿದ್ದಾರೆ. ಈ ಫಾರ್ಮುಲಾದಿಂದ ಕೊರೋನಾ ವೈರಸ್ ಹರಡಂತೆ ನಿಗ್ರಹಿಸಬಹುದು ಎಂದಿದ್ದಾರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಒಂದು ತಂಡ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ರಾಜೀವ್ ಚೌಧರಿ ಹೇಳುವ ಪ್ರಕಾರ, ಈ 50-30 ಸೂತ್ರವನ್ನು ಸರಿಯಾಗಿ ಪಾಲಿಸಿದರೆ ಕೊರೋನಾ ಸೋಂಕು ಹರಡುವುದನ್ನು ತಡೆಯಬಹುದಷ್ಟೇ ಅಲ್ಲದೆ, ಹಣಕಾಸು ಬಿಕ್ಕಟ್ಟನ್ನೂ ಸ್ವಲ್ಪ ತಗ್ಗಿಸಬಹುದು.
ಏನಿದು 50:30 ಸೂತ್ರ?
ಲಾಕ್ ಡೌನ್ ಅವಧಿ 50 ದಿನ ಇರಬೇಕು. ಕಟ್ಟುನಿಟ್ಟಾಗಿ ನಿಯಮ ಪಾಲನೆ ಆಗಬೇಕು. ಯಾವುದೇ ಸಡಿಲಿಕೆ ಇರಬಾರದು. ಆ ನಂತರ 30 ದಿನ ಕೆಲಸಗಳಿಗೆ ಅವಕಾಶ ಕೊಡಬೇಕು. ಅದಾದ ಬಳಿಕ ಮತ್ತೆ ಲಾಕ್ ಡೌನ್, ನಂತರ ಕೆಲಸ. ಹೀಗೆ ಈ ಸರಣಿ ಇದೇ ರೀತಿಯಲ್ಲಿ ಮುಂದುವರಿಯಬೇಕು. ಈ ಸಂಶೋಧಕರ ಪ್ರಕಾರ 2022ರವರೆಗೂ ಈ ಚೈನ್ ನಿರಂತರವಾಗಿರಬೇಕಂತೆ. ಇವರ ಒಂದೇ ಷರತ್ತು ಎಂದರೆ, ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲವಾದರೆ ಸೋಂಕು ನಿಗ್ರಹಿಸುವ ಕೆಲಸ ವಿಳಂಬವಾಗಬಹುದು.
ಬ್ರಿಟನ್ ದೇಶದ ಈ ವಿಜ್ಞಾನಿಗಳು 16 ದೇಶಗಳಲ್ಲಿ ದತ್ತಾಂಶಗಳನ್ನ ಕಲೆಹಾಕಿ ಅಧ್ಯಯನ ನಡೆಸಿದ್ದಾರಂತೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
Comments are closed.