ರಾಷ್ಟ್ರೀಯ

ನೂರಾರು ಜನರ ಎದುರೇ ಸಮಾಜವಾದಿ ಪಕ್ಷದ ಮುಖಂಡ, ಪುತ್ರನ ಹತ್ಯೆ

Pinterest LinkedIn Tumblr


ಲಕ್ನೋ: ನೂರಾರು ಜನರ ಎದುರೇ ಸಮಾಜವಾದಿ ಪಕ್ಷ (ಎಸ್‍ಪಿ) ಮುಖಂಡ ಹಾಗೂ ಅವರ ಮಗನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಚೋಟೆಲಾಲ್ ದಿವಾಕರ್ (50) ಮತ್ತು ಸುನಿಲ್ ಕುಮಾರ್ (28) ಕೊಲೆಯಾದವರು. ಸಂಭಾಲ್ ಜಿಲ್ಲೆಯ ಬಹ್ಜೋಯಿ ಸಮೀಪದ ಶಂಶೋಯಿ ಹಳ್ಳಿಯಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಸ್‍ಪಿ ಮುಖಂಡ ಚೋಟೆಲಾಲ್ ಅವರು ಪುತ್ರನ ಜೊತೆಗೆ ಶಂಶೋಯಿ ಗ್ರಾಮದ ಸಮೀಪದ ನರೇಗಾ ಯೋಜನೆ ಅಡಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಸವಿಂದರ್ ಜೊತೆಗೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಸವಿಂದರ್, ಆತನ ಓರ್ವ ಸಂಬಂಧಿ ಬಂದೂಕಿನಿಂದ ಗುಂಡು ಹಾರಿಸಿ ಚೋಟೆಲಾಲ್ ಹಾಗೂ ಸುನೀಲ್ ಅವರನ್ನು ಹತ್ಯೆಗೈದಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಕೆಲವರು ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಎಸ್‍ಪಿ, ಪರಿಸ್ಥಿತಿಯನ್ನು ತಿಳಿಗೊಳಿಸಿ ಭಾರೀ ಭದ್ರತಾ ಪಡೆ ನಿಯೋಜಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಸಂಭಾಲ್ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್, “ಶಂಶೋಯಿ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ಚೋಟೆಲಾಲ್ ದಿವಾಕರ್ ಮತ್ತು ಸವಿಂದರ್ ನಡುವೆ ಜಗಳವಾಗಿದೆ. ಪರಿಣಾಮ ಬಂದೂಕು ಹಿಡಿದಿದ್ದ ಸವಿಂದರ್ ಹಾಗೂ ಮತ್ತೋರ್ವ ಚೋಟೆಲಾಲ್, ಸುನಿಲ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೈದಿದ್ದಾರೆ. ಈ ಸಂಬಂಧ ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಚೋಟೆಲಾಲ್ ದಿವಾಕರ್ ಮತ್ತು ಸವಿಂದರ್ ಇಬ್ಬರ ನಡುವೆ ಹಳೆಯ ದ್ವೇಷವಿತ್ತು. ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಚೋಟೆಲಾಲ್ ಹಾಗೂ ಸುನಿಲ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಯಮುನಾ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಮಾಜಿ ಎಸ್‍ಪಿ ಸಂಸದ ಧರ್ಮೇಂದ್ರ ಯಾದವ್ ಪ್ರತಿಕ್ರಿಯಿಸಿ, ಚೋಟೆಲಾಲ್ ದಿವಾಕರ್ ನಮ್ಮ ಪಕ್ಷದ ಕ್ರೀಯಾಶೀಲ ನಾಯಕ. ಅವರಿಗೆ 2017ರಲ್ಲಿ ಪಕ್ಷವು ಚಂದೌಸಿ ವಿಧಾನಸಭೆಯಿಂದ ಟಿಕೆಟ್ ನೀಡಿತ್ತು. ಆದರೆ ಈ ಸ್ಥಾನವು ಮೈತ್ರಿಗೆ ಹೋಯಿತು. ಸಂಭಾಲ್‍ನಲ್ಲಿ ನಮ್ಮ ನಾಯಕನ ಹತ್ಯೆಯಿಂದ ಪೊಲೀಸರು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ವಿರೋಧ ಪಕ್ಷದವರನ್ನು ವಿಶೇಷವಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ರಾಜ್ಯದಲ್ಲಿ ಸ್ಪಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Comments are closed.