ಕರಾವಳಿ

ಕರಾವಳಿಯಾದ್ಯಂತ ಭಾರೀ ಗಾಳಿ ಮಳೆ : ಗುಡುಗು ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಸಂಪರ್ಕ ಕಡಿತ – ಜನತೆ ಪರದಾಟ

Pinterest LinkedIn Tumblr

ಮಂಗಳೂರು,ಮೇ.18 : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರ ಪರಿಣಾಮ ಕರಾವಳಿ ತೀರದಲ್ಲಿ ‘ಅಂಫಾನ್’ ಚಂಡಮಾರುತದ ಭೀತಿ ಎದುರಾಗಿದ್ದು, ಕರಾವಳಿಯಾದ್ಯಂತ ಭಾನುವಾರ ಸಂಜೆಯಿಂದ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆ ಸುರಿಯಲಾರಂಭಿಸಿದೆ.

ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು, ಕಳೆದ ರಾತ್ರಿಯಿಂದ ಇಂದು ಮುಂಜಾನೆ ಯವರೆಗೂ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ಜಿಲ್ಲೆಯ ಹಲವೆಡೆಗಳಲ್ಲಿ ರಾತ್ರಿ ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದೆ. ಮುಂದಿನ ನಾಲ್ಕು ದಿನ ಮಳೆಯಾಗುವ ಸಾಧ್ಯತೆ‌‌ ಇದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡ (ಟ್ರಫ್) ನಿರ್ಮಾಣವಾಗಿದ್ದು, ಇದರಿಂದ ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ 64.5 ಮೀಮೀ ನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಿಡಿಲಿನೊಂದಿಗೆ ಗಾಳಿ ಕೂಡಾ ಹೆಚ್ಚಾಗಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಇಂದು ಈ ಚಂಡಮಾರುತವು ತೀವ್ರ ಸ್ವರೂಪ ಪಡೆಯಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ‘ಎಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಅಲ್ಲದೆ ಮುಂಗಾರು ಪ್ರವೇಶಕ್ಕೆ ಈ ಚಂಡಮಾರುತವು ತೀವ್ರ ಪರಿಣಾಮ ಬೀರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಕೆಲವೆಡೆ ಭಾರೀ ಗಾಳಿ, ಮಳೆಯ ಮುನ್ಸೂಚನೆ ಇದ್ದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದಿಂದ ಮುನ್ನೆಚ್ಚರಿಕೆ ನೀಡಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಮತ್ತು ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮೇ ಅಂತ್ಯಕ್ಕೆ ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಪ್ರಭಾವ ಬೀರುತ್ತಿರುವ ಚಂಡಮಾರುತದ ಪರಿಣಾಮ ಜೂ. 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿ ಬಳಿಕ ಒಂದೆರಡು ದಿನದ ಬಳಿಕ ರಾಜ್ಯ ಕರಾವಳಿಗೆ ಪ್ರವೇಶ ಪಡೆಯಬಹುದು ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿದ್ಯುತ್ ಸಂಪರ್ಕ ಕಡಿತ : ಜನತೆ ಪರದಾಟ

‘ಅಂಫಾನ್’ ಚಂಡಮಾರುತ ಪರಿಣಾಮ ಕರಾವಳಿಯಾದ್ಯಂತ ಭಾನುವಾರ ಸಂಜೆಯಿಂದ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಭಾರೀ ಗಾಳಿ, ಮಿಂಚು ಹಾಗೂ ಗುಡುಗು ಸಿಡಿಲಿನ
ಅಬ್ಬರಕ್ಕೆ ಮಂಗಳೂರು ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಕೊಂಡು ರಾತ್ರಿ ಇಡೀ ಜನತೆ ಪರದಾಡುವಂತಾಯಿತು.

Comments are closed.