ಅಂತರಾಷ್ಟ್ರೀಯ

ಸಾವಿನ ಸಂಖ್ಯೆ ಹೆಚ್ಚುತ್ತಿರುವ ಪ್ರಶ್ನೆಯನ್ನು ಚೀನಾವನ್ನು ಕೇಳಿ ಎಂದ ಅಮೇರಿಕ ಅಧ್ಯಕ್ಷ

Pinterest LinkedIn Tumblr


ವಾಷಿಂಗ್‌ಟನ್‌: ಅಮೆರಿಕದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಳದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ಬಗ್ಗೆ ನನ್ನನ್ನು ಕೇಳ್ಬೇಡಿ. ಚೀನಾವನ್ನು ಕೇಳಿ ಎಂದು ಪತ್ರಕರ್ತೆಯೊಂದಿಗೆ ಜಗಳವಾಡಿ ಸುದ್ದಿಗೋಷ್ಠಿ ಮೊಟಕುಗೊಳಿಸಿ ಹೊರನಡೆದಿದ್ದಾರೆ.

ಕೊರೊನಾ ವೈರಸ್‌ ವಿಚಾರದಲ್ಲಿ ಚೀನಾ ಮೇಲೆ ಕತ್ತಿ ಮಸೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡ್ರ್ಯಾಗನ್‌ ರಾಷ್ಟ್ರದ ಮೇಲಿನ ಸಿಟ್ಟನ್ನು ಪತ್ರಕರ್ತರ ಮೇಲೆ ತೋರಿಸುತ್ತಿದ್ದಾರೆ. ಸೋಮವಾರ ಶ್ವೇತ ಭವನದ ರೋಸ್‌ ಗಾರ್ಡನ್‌ನಲ್ಲಿ ನಡೆದ ಸುದಿಗೋಷ್ಠಿಯಲ್ಲಿ ಟ್ರಂಪ್‌ ರೇಗಿದ್ದಾರೆ.

ಅಮೆರಿಕದ ಸಿಬಿಎಸ್‌ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತೆ ವಿಜಿಯಾ ಜಿಯಾಂಗ್‌ ಕೇಳಿದ ಪ್ರಶ್ನೆಗೆ ಟ್ರಂಪ್‌ ಕೆಂಡಾಮಂಡಲವಾದರು. ಈಗಲೂ ಪ್ರತಿದಿನ ಅಮೆರಿಕನ್ನರು ಕೊರೊನಾ ವೈರಸ್‌ನಿಂದ ಸಾಯುತ್ತಿದ್ದಾರೆ ಮತ್ತು ನಾವು ಪ್ರತಿದಿನ ಹೆಚ್ಚಿನ ಪಾಸಿಟಿವ್‌ ಕೇಸ್‌ಗಳನ್ನು ಕಾಣುತ್ತಿದ್ದೇವೆ. ಈಗಿದ್ದರೂ ಜಾಗತಿಕ ಸ್ಪರ್ಧೆ ಏಕೆ ಬೇಕು ಎಂದು ಟ್ರಂಪ್‌ಗೆ ಜಿಯಾಂಗ್‌ ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಟ್ರಂಪ್‌, ವಿಶ್ವದೆಲ್ಲೆಡೆ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನೀವು ಈ ಪ್ರಶ್ನೆಯನ್ನು ಚೀನಾಕ್ಕೆ ಕೇಳಬೇಕು. ನನಗೆ ಕೇಳಬೇಡಿ. ಚೀನಾವನ್ನು ಪ್ರಶ್ನಿಸಿ, ಚೀನಾವನ್ನು ಪ್ರಶ್ನಿಸಿದಾಗಲೆಲ್ಲಾ ನಿಮಗೆ ಅಸಾಮಾನ್ಯ ಉತ್ತರಗಳು ದೊರೆಯುತವೆ ಎಂದು ಟ್ರಂಪ್‌ ಹೇಳಿದ್ದಾರೆ.

ಟ್ರಂಪ್‌ ಹೇಳಿಕೆಗೆ ಜೀಯಾಂಗ್‌ ಇದನ್ನು ನನಗೆ ಏಕೆ ಪ್ರತ್ಯೇಕವಾಗಿ ಹೇಳುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದಾಗ, ಟ್ರಂಪ್‌ ನಾನು ಯಾರಿಗೂ ಪ್ರತ್ಯೇಕವಾಗಿ ಹೇಳುತ್ತಿಲ್ಲ. ಇಂತಹ ವ್ಯಂಗ್ಯದ ಪ್ರಶ್ನೆಗಳನ್ನು ಕೇಳಬೇಡಿ ಎಂದು ಮಾತ್ರ ಹೇಳುತ್ತಿದ್ದೇನೆ ಎಂದಿದ್ದಾರೆ. ಅಮೆರಿಕದಲ್ಲಿ ಇದುವರೆಗೂ 80 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

Comments are closed.