ಮಂಗಳೂರು ಮೇ 04 : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿಕೊಂಡು ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿವಿಧ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಎಲ್ಲಾ ನಿರಾಶ್ರಿತರನ್ನು ಜಿಲ್ಲಾಡಳಿತ ಅವರ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಕೋವಿಡ್ -19 ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿದ ಕಾರಣ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಸತಿ ರಹಿತರಾಗಿದ್ದ ಕಾರ್ಮಿಕರನ್ನು ಹಾಗೂ ನಿರಾಶ್ರಿತರನ್ನು ದ.ಕ.ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿದ್ದ ವಸತಿ ನಿಲಯಗಳಲ್ಲಿ ಮಾರ್ಚ್ 27ರಿಂದ ಆಶ್ರಯ ನೀಡಲಾಗಿತ್ತು.
ಪುರಭವನ, ವಿವಿಧ ಸಭಾಂಗಣ, ಸರಕಾರಿ ವಿದ್ಯಾರ್ಥಿ ನಿಲಯ, ಹಾಸ್ಟೆಲ್ಗಳಲ್ಲಿ ಆಶ್ರಯ ನೀಡಲಾಗಿತ್ತು. ಇವರಿಗೆ ದಿನದ ಎಲ್ಲಾ ಹೊತ್ತು ಊಟೋಪಚಾರದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿತ್ತು. ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು.
ಈ ಎಲ್ಲಾ ಕಾರ್ಮಿಕರ ಪೈಕಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಏಪ್ರಿಲ್ ೨೪ರಿಂದ ರಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ. ಮಂಗಳೂರು ನಗರದಲ್ಲಿ ಕಟ್ಟಡ ಕಾರ್ಮಿಕರು ಹೆಚ್ಚಾಗಿರುವ ಕೂಳೂರು, ಸುರತ್ಕಲ್, ಪಣಂಬೂರು, ಬೈಕಂಪಾಡಿ, ಯೆಯ್ಯಾಡಿ, ಮುಲ್ಕಿ, ಉಳ್ಳಾಲ, ಬಂದರು, ಹೊಯಿಗೆ ಬಜಾರ್ ಮುಂತಾದ ಪ್ರದೇಶಗಳು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಂದ ತಮ್ಮ ತಮ್ಮ ಜಿಲ್ಲೆಗಳಿಗೆ ಕಟ್ಟಡ ಮತ್ತು ಕೃಷಿ ಕೆಲಸಗಳಿಗೆ ತೆರಳಲು ಇಚ್ಚಿಸಿದ 7119 ಕಾರ್ಮಿಕರನ್ನು ಕೆ.ಎಸ್.ಆರ್.ಟಿ.ಸಿ. ಹಾಗೂ ಖಾಸಗಿ ಬಸ್ ಗಳ ಮೂಲಕ ಅವರ ಸ್ವಗ್ರಾಮಗಳಿಗೆ ಕಳುಹಿಸಲಾಗಿದೆ.
ಒಟ್ಟು 266 ಬಸ್ ಗಳನ್ನು ಇದಕ್ಕಾಗಿ ಬಳಸಲಾಗಿತ್ತು. ಹೆಚ್ಚಿನ ಕಾರ್ಮಿಕರು ಬಾಗಲಕೋಟೆ, ಕೊಪ್ಪಳ, ಬಿಜಾಪುರ, ಯಾದಗಿರಿ, ಗದಗ, ರಾಯಚೂರು ಹಾಗೂ ಗುಲ್ಪರ್ಗ ಜಿಲ್ಲೆಯವರಾಗಿರುತ್ತಾರೆ.
ಬಸ್ಸುಗಳಲ್ಲಿ ಸಂಚರಿಸುವಾಗ ಸಾಮಾಜಿಕ ಅಂತರ ಕಾಪಾಡಿಕೊಂಡು ಆಸನದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರತೀ ಬಸ್‌ನಲ್ಲಿ 22-25 ಮಂದಿಯನ್ನಷ್ಟೇ ಕಳುಹಿಸಲಾಗಿತ್ತು.
ಜಿಲ್ಲಾಡಳಿತದ ಜೊತೆಗೆ ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆಯು ಈ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ವಿವಿಧ ಜಿಲ್ಲೆಗಳಿಗೆ ತೆರಳುವ ಮುನ್ನ ಎಲ್ಲಾ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗಿದೆ. ಕಾರ್ಮಿಕರಿಗೆ ಪ್ರಯಾಣದ ಸಮಯದಲ್ಲಿ ಅವಶ್ಯವಿರುವ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಸಹ ಒದಗಿಸಲಾಗಿತ್ತು.
Comments are closed.