
ನವದೆಹಲಿ(ಏ.19): ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಜಾರಿಯಲ್ಲಿರುವ ಕೊರೋನಾ ಲಾಕ್ಡೌನ್ ಪರಿಣಾಮ ಐಟಿ-ಬಿಟಿ ಸೇರಿದಂತೆ ವಿವಿಧ ವಲಯಗಳ ಉದ್ಯಮಗಳು ಸ್ಥಗಿತಗೊಂಡಿದೆ. ಅಗತ್ಯ ಸಾಮಾಗ್ರಿಗಳನ್ನು ಪೂರೈಸುವ ಅಂಗಡಿಗಳ ಹೊರತಾಗಿ ಇತರ ಎಲ್ಲವೂ ಬಾಗಿಲು ಮುಚ್ಚಿವೆ. ಹಾಗಾಗಿಯೇ ದೇಶದ್ಯಂತ ಕೋಟ್ಯಾಂತರ ವಲಸಿಗ ಕಾರ್ಮಿಕರು, ಸಣ್ಣ ಪುಟ್ಟ ಉದ್ದಿಮೆದಾರರು ಮುಂದೇನು ಎಂದು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರವೂ ಕೆಲವೊಂದು ಮಹತ್ವದ ಘೋಷಣೆಗಳನ್ನು ಮಾಡಿದರೂ ವಲಸಿಗ ಕಾರ್ಮಿಕರ ಪರಿಸ್ಥಿತಿಯಂತೂ ಹಾಗೆಯೇ ಇದೆ. ಹೀಗಿರುವಾಗಲೇ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವೂ ಭಾನುವಾರ ಅಂದರೆ ಇಂದು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್ಒಪಿ) ಬಿಡುಗಡೆ ಮಾಡಿದ್ದು, ವಲಸಿಗ ಕಾರ್ಮಿಕರ ವಿಚಾರದಲ್ಲಿ ಇದನ್ನು ಅನುಸರಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿ ಎಲ್ಲವನ್ನು ಬಂದ್ ಮಾಡಿದೆ. ಇದರಿಂದ ಕಾರ್ಮಿಕರು ಊಟಕ್ಕೂ ದುಡ್ಡಿಲ್ಲದೇ ಪರದಾಡುವಂತಾಗಿದೆ. ಹಾಗಾಗಿ ಇವರ ಜೀವಕ್ಕೂ ಭದ್ರತೆ ನೀಡುವ ಸಲುವಾಗಿ ಈ ಎಸ್ಒಪಿ (standard operating procedure) ಅನುಸರಿಸಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಹೀಗಿವೆ..
ವಲಸಿಗರ ಕಾರ್ಮಿಕರು ಎಲ್ಲಿ ವಾಸ್ಯವ್ಯ ಹೂಡಿದ್ದಾರೋ ಅಲ್ಲಿಯೇ ತಮ್ಮ ಕೆಲಸ ಮುಂದುವರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು
ಎಲ್ಲಾ ವಲಸಿಗ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು.
ಕಾರ್ಮಿಕರು ತಮ್ಮ ಮನೆಗಳಿಗೆ ಹೋಗಬೇಕೆಂದು ಬಯಸಿದಲ್ಲಿ ರಾಜ್ಯ ಸರ್ಕಾರ ಅದಕ್ಕೆ ವ್ಯವಸ್ಥೆ ಮಾಡಬೇಕು. ಈ ಆದೇಶ ರಾಜ್ಯದೊಳಗಿನ ವಲಸಿಗ ಕಾರ್ಮಿಕರಿಗೆ ಅನ್ವಯವಾಗುತ್ತದೆಯೋ ಹೊರತು ಬೇರೆ ರಾಜ್ಯಗಳಿಂದ ಬಂದವರಿಗಲ್ಲ.
ಕಾರ್ಮಿಕರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡುವಾಗ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು
ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶಿಸಬೇಕು
ವಲಸಿಗ ಕಾರ್ಮಿಕರಿಗೆ ಸೂಕ್ತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಬೇಕು
Comments are closed.