
ಚೆನ್ನೈ: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸೋಮವಾರ ಲಾಕ್‌ಡೌನ್ ಅನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸಿನ ಮೇರೆಗೆ ಇಂದು ಪಳನಿಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದೀಗ ತಮಿಳುನಾಡಿನಲ್ಲಿ ಅಸಂಘಟಿತ ಕಾರ್ಮಿಕರ ಕುಟುಂಬಗಳು, ಕಟ್ಟಡ ಕಾರ್ಮಿಕರು ಎರಡನೇ ಬಾರಿ 1,000 ರೂ. ಪಡೆದುಕೊಳ್ಳಲಿದ್ದಾರೆ. ವಲಸೆ ಕಾರ್ಮಿಕರಿಗೆ 15 ಕೆ.ಜಿ ಅಕ್ಕಿ ಸೇರಿದಂತೆ ಹಲವು ಅಡುಗೆ ಸಾಮಗ್ರಿಗಳನ್ನು ಸರ್ಕಾರ ನೀಡುತ್ತಿದೆ.
ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ 25 ರಂದು 21 ದಿನಗಳ ಕಾಲ ವಿಧಿಸಿದ್ದ ಲಾಕ್‌ಡೌನ್ ನಾಳೆ ಮುಕ್ತಾಯವಾಗುತ್ತಿದೆ. ಕೊರೊನಾ ವೈರಸ್ ನಿಯಂತ್ರಣ ಬಾರದ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳು ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಿಕೊಂಡಿವೆ. ಆ ರಾಜ್ಯಗಳ ಸಾಲಿಗೆ ಇದೀಗ ತಮಿಳುನಾಡು ಸೇರಿಕೊಂಡಿದೆ.
ಲಾಕ್‌ಡೌನ್ ವಿಸ್ತರಿಸಿಕೊಂಡಿರುವ 7ನೇ ರಾಜ್ಯವಾಗಿ ತಮಿಳುನಾಡು ಹೊರಹೊಮ್ಮಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರ, ಪಂಜಾಬ್, ಒಡಿಶಾ, ಕರ್ನಾಟಕ, ರಾಜಸ್ಥಾನ, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಆಯಾ ಮುಖ್ಯಮಂತ್ರಿಗಳು ಲಾಕ್‌ಡೌನ್ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಮಾರಣಾಂತಿಕ ವೈರಸ್ ಅನ್ನು ಸಂಪೂರ್ಣ ನಿರ್ಣಾಮ ಮಾಡಲು ಪಣ ತೊಟ್ಟಿದ್ದಾರೆ.
ಲಾಕ್‌ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 13 ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಉಲ್ಲೇಖಿಸಿದ ಪಳನಿಸ್ವಾಮಿ, ಹಲವಾರು ರಾಜ್ಯಗಳ ನಾಯಕರು ಇದನ್ನು ವಿಸ್ತರಿಸಲು ಒಲವು ತೋರಿದ್ದಾರೆ ಎಂದು ಹೇಳಿದ್ದಾರೆ ಎಂಬುದನ್ನು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
Comments are closed.