ಕರ್ನಾಟಕ

ರಾಜ್ಯದ 50 ಲಕ್ಷ ಮಂದಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ!

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್ ಹೊಡೆತದಿಂದ ರಾಜ್ಯದ ಉದ್ಯಮ ಕ್ಷೇತ್ರದಲ್ಲಿ 25% ಉದ್ಯೋಗ ಕಡಿತವಾಗುವ ಅಪಾಯವಿದೆ ಎಂಬ ಆತಂಕಕಾರಿ ಸಂಗತಿ ಚರ್ಚೆಯಾಗುತ್ತಿದೆ. ಇದು ತಾತ್ಕಾಲಿಕ ಎಂದು ಕೆಲ ಪರಿಣಿತರು ಭಾವಿಸಿದರೂ ಭವಿಷ್ಯದಲ್ಲಿ ದುಡಿಯುವ ವರ್ಗ ಆತಂಕದಲ್ಲೇ ದಿನದೂಡಬೇಕಾಗುತ್ತದೆ.

ರಾಜ್ಯದ ನಾನಾ ವಲಯದಲ್ಲಿ 2 ಕೋಟಿ ಮಂದಿ ದುಡಿಯುತ್ತಿದ್ದು, ಅವರಲ್ಲಿ 50 ಲಕ್ಷ ಮಂದಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ನೋಟ್‌ ಬ್ಯಾನ್‌ ಜಿಎಸ್‌ಟಿ ಜಾರಿ ಬಳಿಕ ಹಿನ್ನಡೆ ಅನುಭವಿಸಿದ್ದ ಉದ್ಯಮ ರಂಗದಲ್ಲಿಇತ್ತೀಚೆಗೆ ಸ್ವಲ್ಪ ಚೇತರಿಕೆ ಲಕ್ಷಣ ಕಂಡಿತ್ತು. ಆದರೆ ಲಾಕ್‌ಡೌನ್‌ ಅದಕ್ಕೆ ಮಾರಕ ಘಾತವನ್ನು ನೀಡಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಕೈಗಾರಿಕಾ ಕ್ಷೇತ್ರ, ಅದರಲ್ಲೂಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರದಲ್ಲಿಉದ್ಯೋಗಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಕಂಡುಬಂದಿದೆ. ಹಾಲಿ ಸನ್ನಿವೇಶದಲ್ಲಿ ಬ್ಯಾಂಕ್‌ ಹಾಗೂ ಸರಕಾರ ಕೈಹಿಡಿಯದಿದ್ದಲ್ಲಿ ಕೈಗಾರಿಕೆ ಘಟಕಗಳು ಪುನಾರಂಭವಾಗುವುದು ಕಷ್ಟ. ಮಾಲೀಕರು ಮಿತವ್ಯಯಕ್ಕೆ ಮುಂದಾದಲ್ಲಿಉದ್ಯೋಗ ಕಡಿತ ಅನಿವಾರ್ಯವಾಗಲಿದೆ. ಇದರಿಂದ ವರ್ಷದೊಳಗೆ 25 ಲಕ್ಷ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯನ್ನು ಕೈಗಾರಿಕೆಗಳ ಸಂಘಟನೆ ‘ಅಸೋಚಂ’ ಅಂದಾಜಿಸಿದೆ.

ಸೇವಾ ವಲಯಕ್ಕೂ ತಟ್ಟಿದ ಬಿಸಿ: ರಾಜ್ಯದಲ್ಲಿ ಸೇವಾ ವಲಯ ಅಧಿಕ ಉದ್ಯೋಗ ಸೃಷ್ಟಿ ಹಾಗೂ ಹೆಚ್ಚು ಆದಾಯ ತಂದುಕೊಡುವಲ್ಲಿ ಮುಂಚೂಣಿಯಲ್ಲಿದೆ. ಡಾಲರ್‌ ಲೆಕ್ಕದಲ್ಲಿ ವಹಿವಾಟು ನಡೆಸುವ ಐಟಿ, ಬಿಪಿಒ ಈ ವಲಯಕ್ಕೆ ಸೇರಿದೆ. ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಕೊರೊನಾ ರುದ್ರನರ್ತನ ಮಾಡುತ್ತಿರುವುದು ಈ ಕ್ಷೇತ್ರಗಳಲ್ಲಿನ ಉದ್ಯೋಗವನ್ನು ಕಸಿಯುವ ಎಲ್ಲಲಕ್ಷಣಗಳು ಕಾಣುತ್ತಿವೆ. ಇದರಿಂದ ಐಟಿ-ಬಿಟಿ ವಲಯವನ್ನು ಅವಲಂಬಿಸಿರುವ ಇತರ ಕ್ಷೇತ್ರಗಳಲ್ಲೂ ಉದ್ಯೋಗ ನಷ್ಟವಾಗಲಿದೆ. ಸ್ವಯಂ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿರುವ ಪ್ರವಾಸೋದ್ಯಮ/ಆತಿಥ್ಯ, ಸಾರಿಗೆ ಕ್ಷೇತ್ರಗಳು ಸೊರಗಲಿವೆ. ಆದರೆ, ಸೇವಾವಲಯದಲ್ಲಿಸ್ವಲ್ಪ ಉದ್ಯೋಗ ಚೇತರಿಕೆ ಕಾಣಬಹುದು.

ಸರಕಾರಿ ಉದ್ಯೋಗಕ್ಕೂ ಕುತ್ತು
ದಶಕದಿಂದೀಚಿಗೆ ಸರಕಾರದ ನಾನಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಬದಲು ಗುತ್ತಿಗೆ ಪದ್ಧತಿಗೆ ಮಣೆ ಹಾಕಿದೆ. ಬೊಕ್ಕಸ ಬರಿದಾಗಿರುವ ಕಾರಣ ಒಂದು ವರ್ಷಗಳ ಕಾಲ ಹೊಸ ನೇಮಕಾತಿಗೆ ತಡೆಯಾದೀತು.

ಕೊರೊನಾ ಲೈವ್ ಅಪ್ಡೇಟ್ಸ್: ದೇಶದಲ್ಲಿ 7600 ಸೋಂಕಿತರು!

ಉದ್ಯೋಗ ಕಡಿತ ಭೀತಿಗೆ ಒಳಗಾದ ಕ್ಷೇತ್ರ

* ಕೈಗಾರಿಕೆ(ಮುಖ್ಯವಾಗಿ ಎಂಎಸ್‌ಎಂಇ)

* ಐಟಿ, ಬಿಪಿಒ ಸಹಿತ ಸೇವಾ ವಲಯ

* ಪ್ರವಾಸೋದ್ಯಮ/ಆತಿಥ್ಯ/ಟ್ರಾವೆಲ್ಸ್‌

* ಅಸಂಘಟಿತ ವಲಯದ ಕೂಲಿ ಕಾರ್ಮಿಕರು

ಸರಕಾರದ ತುರ್ತು ನೆರವು ಹೇಗೆ?

* ಎಂಎಸ್‌ಎಂಇ ಉದ್ಯಮಿಗಳ ಸಾಲದ ಮೇಲಿನ ಬಡ್ಡಿ ಮನ್ನಾ

* ಉದ್ಯೋಗಿಗಳ ಬ್ಯಾಂಕ್‌ ಖಾತೆಗೆ 3 ತಿಂಗಳು ಅರ್ಧದಷ್ಟು ವೇತನ ಜಮೆ

* ಉತ್ಪಾದನಾ ವಲಯಕ್ಕೆ ಪುನಶ್ಚೇತನ ಪ್ಯಾಕೇಜ್‌ ಘೋಷಣೆ

* ಎಲ್ಲಾ ಹಂತದಲ್ಲೂ ಮಿತವ್ಯಯಕ್ಕೆ ಮಣೆ

* ಕಟ್ಟಡ ನಿರ್ಮಾಣ, ಮೂಲಸೌಕರ್ಯ ಕ್ಷೇತ್ರದ ಶ್ರಮಿಕ ವರ್ಗಕ್ಕೆ ನೆರವು

ಕೊರೊನಾ ಕಾರಣದಿಂದ ಉದ್ಯೋಗ ನಷ್ಟ ತಪ್ಪದು. ಉತ್ಪಾದನಾ ಕ್ಷೇತ್ರ ಒಳಗೊಂಡಂತೆ ಎಂಎಸ್‌ಎಂಇ ನೆರವಿಗೆ ಸರಕಾರ ಧಾವಿಸಬೇಕು. ಜನ್‌ ಧನ್‌ ರೀತಿ ಉದ್ಯೋಗಿಗಳ ಬ್ಯಾಂಕ್‌ ಖಾತೆಗೆ 3 ತಿಂಗಳು ಹಣ ಜಮೆ ಮಾಡಲಿ
– ಜೆ.ಕ್ರಾಸ್ಟಾ, ‘ಫಿಕ್ಕಿ’ಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ

ಎಂಎಸ್‌ಎಂಇ ಜತೆಗೆ ಬೀದಿ ಬದಿ ವ್ಯಾಪಾರ ಮಾಡುವ ಮೈಕ್ರೊ ವರ್ಗದವರ ಜೀವನ ಭದ್ರತೆಗೆ ಸರಕಾರ ತುರ್ತ ಗಮನ ಅಗತ್ಯ. ಲಾಕ್‌ಡೌನ್‌ ನೆಪ ಹೇಳಿ ಉತ್ಪಾದನೆಗೆ ತಡೆ ಹಾಕುವುದು ಸಲ್ಲ”.
– ಸಂಪತ್‌ ರಾಮನ್‌, ‘ಅಸೋಚಂ’ ಕರ್ನಾಟಕ ವಲಯದ ಅಧ್ಯಕ್ಷ

ಕೊರೊನಾದಿಂದ ನೆಲ ಕಚ್ಚಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುನಶ್ಚೇತನ ನೀಡಿದರೆ 25 ಲಕ್ಷ ಮಂದಿಯ ಜೀವನ ಹಸನಾಗುತ್ತದೆ. ಇದರತ್ತ ಸರಕಾರ ಆದ್ಯ ಗಮನ ನೀಡಲಿ.
– ಶ್ಯಾಮರಾಜು, ಅಧ್ಯಕ್ಷರು ದಕ್ಷಿಣ ಭಾರತ ಹೋಟೆಲ್‌ ಉದ್ಯಮದಾರರ ಸಂಘ

ಪ್ರವಾಸಿಗರು ಬಂದಲ್ಲಿ ಮಾತ್ರ ಟ್ಯಾಕ್ಸಿ, ಟ್ರಾವೆಲ್‌ಗೆ ಕೆಲಸ ಸಿಗುತ್ತದೆ. ಸದ್ಯ ಸ್ತಬ್ಧಗೊಂಡಿರುವ ಉದ್ಯಮಕ್ಕೆ ನೆರವಾಗಲು ಸಾಲದ ಕಂತನ್ನು ಸರಕಾರ ತುಂಬಿದರೆ ಒಳಿತಾಗುವುದು.
– ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ರಾಜ್ಯ ಟ್ರಾವೆಲ್‌ ಹಾಗೂ ಟ್ಯಾಕ್ಸಿ ವಾಹನಗಳ ಮಾಲೀಕರ ಸಂಘ

Comments are closed.