ಕರ್ನಾಟಕ

ಲಾಕ್ ಡೌನ್ ಅವಧಿ ಮುಗಿದ ನಂತರ ಮುಂದೇನು?

Pinterest LinkedIn Tumblr


ಬೆಂಗಳೂರು(ಏ. 03): ಕೊರೋನಾ ವೈರಸ್ ಹರಡದಂತೆ ಆರಂಭದಲ್ಲೇ ನಿಯಂತ್ರಿಸಲು ಮೂರು ವಾರ ಕಾಲ ದೇಶವ್ಯಾಪಿ ಲಾಕ್ ಡೌನ್ ಘೋಷಿಸಲಾಗಿದೆ. ಇದು ಏಪ್ರಿಲ್ 14ಕ್ಕೆ ಅಂತ್ಯವಾಗಲಿದೆ. ಅದಾದ ಬಳಿಕ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎನ್ನುವುದೇ ವಿವಿಧ ಸರ್ಕಾರಗಳ ಚಿಂತೆಯಾಗಿದೆ. ನಿನ್ನೆ ಪ್ರಧಾನಿ ಮೋದಿ ಅವರು ವಿವಿಧ ರಾಜ್ಯ ಸರ್ಕಾರಗಳ ಸಿಎಂಗಳೊಂದಿಗೆ ನಡೆಸಿದ ವಿಡಿಯೋ ಸಂವಾದದ ವೇಳೆ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಲಾಕ್ ಡೌನ್ ನಂತರದ ಪರಿಸ್ಥಿತಿ ನಿಭಾಯಿಸಲು ಎಲ್ಲರೂ ಸೇರಿ ಒಂದು ಏಕಪ್ರಕಾರದ ಕಾರ್ಯನೀತಿ ರೂಪಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ ರಾಜಕೀಯ, ಉದ್ಯಮ, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳ ತಜ್ಞರು, ಚಿಂತಕರು, ನೀತಿರೂಪಕರು ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಹಲವು ಪ್ರಮುಖ ಸಲಹೆಗಳು ವ್ಯಕ್ತವಾಗಿವೆ. ಹಂತಹಂತವಾಗಿ ಲಾಕ್ ಡೌನ್ ನಿಯಮಾವಳಿಗಳನ್ನ ಸಡಿಲಗೊಳಿಸುವುದು ಒಂದಾಗಿದೆ.

ಬಿಜೆಪಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಆರ್.ಕೆ. ಮಿಶ್ರಾ ಅವರು ಈ ಬಗ್ಗೆ ಒಂದಷ್ಟು ಸುಳಿವು ನೀಡಿದ್ದಾರೆ. ವಿವಿಧ ತಜ್ಞರೊಂದಿಗಿನ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನ ಸೇರಿಸಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಚರ್ಚೆಯಲ್ಲಿ ವ್ಯಕ್ತವಾದ ಸಲಹೆಗಳು:

1) ನಾಲ್ಕು ವಾರದಲ್ಲಿ ಹಂತ ಹಂತವಾಗಿ ನಿರ್ಬಂಧ ಸಡಿಲಿಕೆ ಮಾಡಬೇಕು. ಐಟಿ ವಲಯ, ಹಣಕಾಸು ಮತ್ತು ಬಿಪಿಒ ಸಂಸ್ಥೆಗಳು ಲಾಕ್ ಡೌನ್ ಮುಕ್ತಾಯಗೊಂಡ ನಂತರದ ಮೊದಲ ವಾರ ಶೇ. 25ರಷ್ಟು ಉದ್ಯೋಗಿಗಳನ್ನಷ್ಟೇ ಕಚೇರಿಯಲ್ಲಿ ಕೆಲಸ ಮಾಡಲು ಬಿಡಬಹುದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕಾಗುತ್ತದೆ. ಎರಡನೇ ವಾರ ಶೇ. 50, ಮೂರನೇ ವಾರ ಶೇ. 75 ಉದ್ಯೋಗಿಗಳು ಕಚೇರಿಗೆ ಬರಬಹುದು. ನಾಲ್ಕನೇ ವಾರ ಬೇಕಾದರೆ ಎಲ್ಲರನ್ನೂ ಕರೆಸಬಹುದು. ಆದರೆ, ಕಚೇರಿಯಲ್ಲಿ ಪ್ರತಿಯೊಬ್ಬರೂ ದೈಹಿಕ ಅಂತರ ಪಾಲನೆ ಮಾಡಲೇಬೇಕು.

2) ಆಹಾರ ಮತ್ತು ಅಗತ್ಯ ವಸ್ತುಗಳ ಉತ್ಪಾದಿಸುವ ಕಾರ್ಖಾನೆಗಳು ಮೊದಲ ವಾರದಿಂದಲೇ ಕಾರ್ಯ ನಿರ್ವಹಿಸಲು ಪ್ರಾರಂಭಿಸಬಹುದು.

3) ತುರ್ತು ಅಗತ್ಯ ಇಲ್ಲದ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ನಾಲ್ಕು ವಾರಗಳ ನಿರ್ಬಂಧ ಸಡಿಲಿಕೆ ಕ್ರಮ ಅನುಸರಿಸಬೇಕು. ಹೆಚ್ಚು ಮಾನವ ಶಕ್ತಿಯ ಅಗತ್ಯ ಇಲ್ಲದ ಘಟಕಗಳನ್ನ ಮೊದಲು ಪುನಾರಂಭಿಸಬಹುದು.

4) ಸಾರ್ವಜನಿಕ ಸಾರಿಗೆಯ ನಿಷೇಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಬೇಕಾಗಬಹುದು. ಇಲ್ಲಿ ವ್ಯಕ್ತಿಗಳ ನಡುವೆ ದೈಹಿಕ ಅಂತರ ಪಾಲಿಸಲು ಸಾಧ್ಯವಾಗದೇ ಹೋಗಬಹುದಾದ್ದರಿಂದ 4 ವಾರ ಸ್ಥಗಿತಗೊಳಿಸುವುದು ಉತ್ತಮ.

5) ಸುರಕ್ಷತಾ ಕ್ರಮಗಳನ್ನ ಅನುಸರಿಸುವ ಖಾಸಗಿ ಸಾರಿಗೆ ವ್ಯವಸ್ಥೆಗೆ ಅನುವು ಮಾಡಿಕೊಡಬಹುದು.

6) ಸರಿಯಾದ ಸ್ವಚ್ಛತೆ ಮತ್ತು ದೈಹಿಕ ಅಂತರ ನಿಯಮ ಪಾಲಿಸುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಹುದು.

7) ಇ-ಕಾಮರ್ಸ್ ಕಂಪನಿಗಳ ಕಾರ್ಯನಿರ್ವಹಣೆ ಮೊದಲ ವಾರದಲ್ಲೇ ಪುನಾರಂಭವಾಗಲಿ

8) ಶಾಲಾ ಕಾಲೇಜು, ಮಾಲ್​ಗಳು, ಚಿತ್ರಮಂದಿರಗಳು ಸೋಂಕು ಹರಡಲು ಸುಲಭ ಸ್ಥಳವಾದ್ದರಿಂದ ಇನ್ನೂ 4 ವಾರ ಇವುಗಳನ್ನ ಬಂದ್ ಮಾಡುವುದು ಉತ್ತಮ.

ಹಾಗೆಯೇ, ಕೊರೊನಾ ವೈರಸ್ ಸುಲಭವಾಗಿ ಹರಡಬಲ್ಲದೆಂದು ಪರಿಗಣಿಸಲಾದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಹೆಚ್ಚಿನ ನಿಗಾ ಇರಿಸಬೇಕಾಗುತ್ತದೆ. ಇಲ್ಲಿ ಇನ್ನೂ 4 ವಾರದವರೆಗೆ ಸಂಪೂರ್ಣ ಲಾಕ್ ಡೌನ್ ಹೇರಬೇಕಾಗುತ್ತದೆ.

ಇವಿಷ್ಟೂ ಆರ್.ಕೆ. ಮಿಶ್ರಾ ಅವರು ಟ್ವೀಟ್ ಮಾಡಿರುವ ವಿಚಾರಗಳಾಗಿವೆ. ಇನ್ನೂ ಸಮಾಲೋಚನೆಯ ಹಂತದಲ್ಲಿದ್ದು ಇವು ಸದ್ಯಕ್ಕೆ ವ್ಯಕ್ತವಾಗಿರುವ ಸಲಹೆಗಳಾಗಿವೆ. ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬಹುದೆಂದು ಎಣಿಸಲಾಗಿದೆ.

Comments are closed.