
ಬೆಂಗಳೂರು(ಏ. 02): ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ರವಿ ಡಿ ಚನ್ನಣ್ಣನವರ್ ಈಗ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿರುವ ರವಿ ಚೆನ್ನಣ್ಣನವರ್ ಅವರು ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಭ್ರಷ್ಟ ಆರ್ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅತ್ತಿಬೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿಭಾಗ ಚೆಕ್ಪೋಸ್ಟ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಹೋಮ್ ಗಾರ್ಡ್ ವಿವೇಕ್, ಆರ್ಟಿಒ ಬ್ರೇಕ್ ಇನ್ಸ್ಪೆಕ್ಟರ್ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಬಂಧಿಸಲಾಗಿದೆ. ಇವರಿಂದ 12,350 ರೂಪಾಯಿ ವಶಪಡಿಸಲಾಗಿದೆ. ಇಬ್ಬರು ಬ್ರೇಕ್ ಇನ್ಸ್ಪೆಕ್ಟರ್ಗಳನ್ನ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಶಿವಮೂರ್ತಿ ಇವತ್ತು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಅತ್ತಿಬೆಲೆ ಚೆಕ್ಪೋಸ್ಟ್ನಲ್ಲಿ ತಮಿಳುನಾಡಿನ ಕಡೆಯಿಂದ ಕರ್ನಾಟಕದ ಕಡೆ ಬರುತ್ತಿದ್ದ ವಾಹನಗಳನ್ನ ತಡೆದು ನಿಲ್ಲಿಸಲಾಗುತ್ತಿತ್ತು. ಸಾರಿಗೆ ಅಧಿಕಾರಿಗಳಾದ ಕರಿಯಪ್ಪ ಮತ್ತು ಜಯಣ್ಣ ಅವರ ಮಾರ್ಗದರ್ಶನದಲ್ಲಿ ವಿವೇಕ್ ಎಂಬ ಹೋಮ್ ಗಾರ್ಡ್ ಸಿಬ್ಬಂದಿ ವಾಹನಗಳನ್ನ ನಿಲ್ಲಿಸಿ ಹಣ ವಸೂಲಿ ಮಾಡುತ್ತಾ ಇದ್ದ. ಟೆಂಪ್ರವರಿ ಪರ್ಮಿಟ್ ಕೊಡುವ ಹೆಸರಲ್ಲಿ ಒಂದೊಂದು ವಾಹನದಿಂದ 400-500 ರೂಪಾಯಿ ಹಣ ಪಡೆಯಲಾಗುತ್ತಿತ್ತು. ಈ ವೇಳೆ, ಲಾರಿ ಚಾಲಕನಾಗಿ ಮಾರುವೇಷದಲ್ಲಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಅವರು ಆರೋಪಿಗಳನ್ನು ಹಿಡಿದು ಬಂಧಿಸಿದ್ದಾರೆ.
ಗದಗ ಮೂಲದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ನಿಯುಕ್ತರಾಗುವುದಕ್ಕಿಂತ ಮುಂಚೆ ಬೆಳಗಾವಿ, ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು ನಗರ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕರ್ತವ್ಯ ನಿಭಾಯಿಸಿದ್ಧಾರೆ.
Comments are closed.