ಕರ್ನಾಟಕ

ಕೋವಿಡ್ 19: ಕಕ್ಷಿದಾರರಿಗೆ ನ್ಯಾಯಾಲಯದ ಪ್ರವೇಶಕ್ಕೆ ನಿರ್ಬಂಧ

Pinterest LinkedIn Tumblr


ಬೆಂಗಳೂರು: ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ಈಗಾಗಲೇ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹೈಕೋರ್ಟ್‌, ಗುರುವಾರದಿಂದ (ಮಾರ್ಚ್‌ 19) ಹೈಕೋರ್ಟ್‌ನ ಮೂರು ಪೀಠಗಳು ಮತ್ತು ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳಿಗೆ ಕಕ್ಷಿದಾರರು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧ ಹೇರಿದೆ.

ಈ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಅವರ ಆದೇಶದ ಅನುಸಾರ ರಿಜಿಸ್ಟ್ರಾರ್‌ ಜನರಲ್‌ ರಾಜೇಂದ್ರ ಬಾದಾಮಿಕರ್‌ ಬುಧವಾರ (ಮಾರ್ಚ್‌ 18)ರಂದು ನೋಟಿಸ್‌ ಪ್ರಕಟಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ:
– ಕರ್ನಾಟಕ ಹೈಕೋರ್ಟ್‌ ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ನ್ಯಾಯಪೀಠ, ಬೆಂಗಳೂರು ನಗರದಲ್ಲಿರುವ ಸಿಟಿ ಸಿವಿಲ್‌, ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಮೆಯೋಹಾಲ್‌, ಕೌಟುಂಬಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ನ್ಯಾಯಾಧೀಕರಣಗಳು ಜಿಲ್ಲಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳು (ನಗರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ) ಮತ್ತು ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಾಧೀಕರಣಗಳ ಆವರಣ ಪ್ರವೇಶಕ್ಕೆ ನಿರ್ಬಂಧ.

– ಅಧಿಕೃತ ಕಾರ್ಯಗಳ ನಿಮಿತ್ತ ಕೋರ್ಟ್‌ಗೆ ಭೇಟಿ ನೀಡುವ ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ವಿನಾಯಿತಿ.

– ಒಂದೊಮ್ಮೆ ಕಕ್ಷಿದಾರರು ಕೊರ್ಟ್‌ಗೆ ಬರುವುದು ಅಗತ್ಯವಾಗಿದ್ದರೆ, ಅವರ ವಕೀಲರು ತಮ್ಮ ಕಕ್ಷಿದಾರರು ಕೋರ್ಟ್‌ಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂಬುದಾಗಿ ತಿಳಿಸಿ ಪತ್ರ ನೀಡಬೇಕು. ಅದರಲ್ಲಿ ಕಕ್ಷಿದಾರರಿಗೆ ಕೋರ್ಟ್‌ ಪ್ರವೇಶಿಸಲು ಅನುಮತಿ ನೀಡುವುದಕ್ಕೆ ಇರುವ ಕಾರಣಗಳನ್ನು ಸಂಕ್ಷಿಪ್ತವಾಗಿ ನಮೂದಿಸಬೇಕು.

– ವಿಚಾರಣೆಗೆ ಹಾಜರಾಗಬೇಕಾದ ಮತ್ತು ಖುದ್ದು ವಾದ ಮಂಡನೆ ಮಾಡಲು ಬಯಸುವ ಕಕ್ಷಿದಾರರು, ಕೋರ್ಟ್‌ ಪ್ರವೇಶ ದ್ವಾರ ಮತ್ತು ತಪಾಸಣಾ ಸ್ಥಳಗಳಲ್ಲಿ ತಾವು ಯಾವ ನಿರ್ದಿಷ್ಟ ಪ್ರಕರಣ ಸಂಬಂಧ ಹಾಜರಾಗಬೇಕಿದೆ ಎಂಬುದರ ಕುರಿತು ಲಿಖೀತವಾಗಿ ಅರ್ಜಿ ಮತ್ತು ದಾಖಲೆ ಸಲ್ಲಿಸಬೇಕು. ಒಂದು ವೇಳೆ ಯಾವುದಾದರೂ ಕಕ್ಷಿದಾರ ಕೋರ್ಟ್‌ಗೆ ಪ್ರಕರಣ ದಾಖಲಿಸಲು, ಆಕ್ಷೇಪಣಾ ಪತ್ರ ಅಥವಾ ಅರ್ಜಿಗಳನ್ನು ಸಲ್ಲಿಸಬೇಕಾದರೆ, ಆ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಅರ್ಜಿ ಸ್ವರೂಪದಲ್ಲಿ ನೀಡಬೇಕು. ಆ ಅರ್ಜಿಗಳು ಪರಿಶೀಲನೆ ನಂತರ ಕೋರ್ಟ್‌ನ ಸಂಬಂಧಪಟ್ಟ ಅಧಿಕಾರಿಯು ಕಕ್ಷಿದಾರರಿಗೆ ಕೋರ್ಟ್‌ ಪ್ರವೇಶಾವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

Comments are closed.