
ಬೀಜಿಂಗ್:ಕೋವಿಡ್-19 ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ನಡುವೆಯೇ ಸೋಂಕು ಮಾರಿ ಬಗ್ಗೆ ಕೆಲವೊಂದು ಒಳ್ಳೆಯ ಸುದ್ದಿಗಳು ಹೊರಬರುತ್ತಿದೆ. ಕೋವಿಡ್ 19 ವೈರಸ್ ಗರ್ಭಿಣಿ ತಾಯಿಯಿಂದ ನವಜಾತ ಮಗುವಿಗೆ ಹರಡುವುದಿಲ್ಲ ಎಂಬುದಾಗಿ ಚೀನಾ ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಸಂಶೋಧನಾ ವರದಿ ಪ್ರಕಾರ, ಕಳೆದ ತಿಂಗಳು ಕೊರೊನಾ ಸೋಂಕು ಚೀನಾದ ವುಹಾನ್ ನಲ್ಲಿ ಎರಡನೇ ಬಾರಿ ಹಬ್ಬಿದ್ದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯೊಬ್ಬರಲ್ಲಿ ಕೋವಿಡ್ 19 ಸೋಂಕು ದೃಢವಾಗಿತ್ತು. ಆದರೆ ಮಗುವಿಗೆ ಜನ್ಮ ನೀಡಿದ ಬಳಿಕ ಪರೀಕ್ಷಿಸಿದಾಗ ನವಜಾತ ಶಿಶುವಿಗೆ ಸೋಂಕು ತಗುಲಿಲ್ಲದಿರುವುದು ಪತ್ತೆಹಚ್ಚಿರುವುದಾಗಿ ತಿಳಿಸಿದೆ.
ಅಷ್ಟೇ ಅಲ್ಲ ಕೋವಿಡ್-19 ಸೋಂಕು ಪೀಡಿತ ನಾಲ್ವರು ಗರ್ಭಿಣಿಯರ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ವುಹಾನ್ ಯೂನಿಯನ್ ಆಸ್ಪತ್ರೆಯಲ್ಲಿ ಸೋಂಕು ಪೀಡಿತ ನಾಲ್ವರ ನವಜಾತ ಶಿಶಿಗಳ ಆರೋಗ್ಯವನ್ನು ತಪಾಸಣೆ ನಡೆಸಲಾಗಿತ್ತು.
ಚೀನಾದ ವುಹಾನ್ ಮತ್ತು ಹುಬೈ ಪ್ರಾಂತ್ಯ ಕೋವಿಡ್-19 ವೈರಸ್ ನ ತವರೂರು ಎಂದು ಪರಿಗಣಿಸಲಾಗಿದೆ. ಹುಝ್ ಹಾಂಗ್ ಯೂನಿರ್ವಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಶೋಧಕರ ಪ್ರಕಾರ, ತಪಾಸಣೆಗೊಳಪಡಿಸಿದ ನವಜಾತ ಶಿಶುಗಳಲ್ಲಿ ಕೋವಿಡ್ 19ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜ್ವರ ಅಥವಾ ಕೆಮ್ಮದ ಲಕ್ಷಣ ಕಂಡು ಬಂದಿಲ್ಲ. ಆದರೂ ಆರಂಭಿಕವಾಗಿ ನವಜಾತ ಶಿಶುಗಳನ್ನು ಪ್ರತ್ಯೇಕವಾಗಿ ಇಂಟೆನ್ಸೀವ್ ಕೇರ್ ಘಟಕದಲ್ಲಿಡಲಾಗಿತ್ತು ಎಂದು ತಿಳಿಸಿದ್ದಾರೆ.
Comments are closed.