
ಬೀಜಿಂಗ್: ಹುಬೆ ಪ್ರಾಂತ್ಯದ ವುಹಾನ್ ನಲ್ಲಿ ಕೊರೊನಾ ವೈರಸ್ ಹಬ್ಬಲು ಅಮೆರಿಕ ಸೇನೆ ಕಾರಣವಾಗಿರಬಹುದು ಎಂದು ಚೀನಾ ಶಾಕಿಂಗ್ ಹೇಳಿಕೆ ನೀಡಿದೆ. ಕಳೆದ ವರ್ಷ ವ್ಯಾಪಾರ ಸಮರ ಆರಂಭಿಸಿದ್ದ ಅಮೆರಿಕ ಮತ್ತು ಚೀನಾ ಈಗ ಕೊರೊನಾ ವಿಚಾರದಲ್ಲೂ ಆರೋಪ ಪ್ರತ್ಯರೋಪ ನಡೆಸಲು ಆರಂಭಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ
ಈ ವಿಚಾರಕ್ಕೆ ಗರಂ ಆದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಅವರು ಅಮೆರಿಕ್ಕೆ ಖಾರವಾದ ಪ್ರಶ್ನೆಗಳನ್ನು ಕೇಳಿದ್ದಾರೆ.
ಅಮೆರಿಕದಲ್ಲಿ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ? ಯಾವ ಆಸ್ಪತ್ರೆಯಲ್ಲಿ ಪೀಡಿತರು ದಾಖಲಾಗಿದ್ದಾರೆ. ಅಮೆರಿಕದ ಸೈನಿಕರು ವುಹಾನ್ ನಲ್ಲಿ ಈ ಮಾರಣಾಂತಿಕ ವೈರಸ್ ತಂದಿರಬಹುದು. ಈ ವಿಚಾರದಲ್ಲಿ ನೀವು ಪಾರದರ್ಶಕವಾಗಿ ನಡೆದುಕೊಳ್ಳಿ. ಸಾರ್ವಜನಿಕವಾಗಿ ಡೇಟಾವನ್ನು ಬಿಡುಗಡೆ ಮಾಡಿ. ನಾವು ಮಾಹಿತಿಗಳನ್ನು ತಿಳಿಸಿದಂತೆ ನೀವು ಯಾಕೆ ತಿಳಿಸುತ್ತಿಲ್ಲ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ
ಅಮೆರಿಕ ಚೀನಾವನ್ನು ದೂರುವ ಬದಲು ಕೊರೊನಾ ವೈರಸ್ ತಡೆಗಟ್ಟಲು ಕ್ರಮಕೈಗೊಳ್ಳಲಿ. ನಮ್ಮನ್ನು ದೂರುವುದರಿಂದ ಅಮೆರಿಕದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ವಿಶ್ವವ್ಯಾಪಿಯಾಗಿ ಹರಡಲು ಆರಂಭಗೊಳ್ಳುತ್ತಿದ್ದಂತೆ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾಗಳು ಬಿಗಿಯಾದ ಕ್ರಮಗಳನ್ನು ಅನುಸರಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಪ್ರತಿಯೊಂದು ವಿಚಾರಕ್ಕೆ ಅಮೆರಿಕ ಚೀನಾವನ್ನು ದೂರುವುದನ್ನು ಮೊದಲು ನಿಲ್ಲಿಸಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಝಹೊ ಲಿಜಿಯನ್ ಅವರು ಈ ವೈರಸ್ ಚೀನಾದಲ್ಲಿ ಮೊದಲು ಸೃಷ್ಟಿಯಾಗಿಲ್ಲ ಮೊದಲು ಅಮೆರಿಕದಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಲು ಕೆಲವೊಂದು ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದು ಅಮೆರಿಕ ಸೇನೆಯ ಲ್ಯಾಬ್ ಒಂದು ಮುಚ್ಚಲ್ಪಟ್ಟಿತ್ತು. ಅಪಾಯಕಾರಿ ವಸ್ತುಗಳು ಇದೆ ಎನ್ನುವ ಕಾರಣಕ್ಕೆ ಅಮರಿಕ ಲ್ಯಾಬ್ ಅನ್ನು ಸ್ಥಗಿತಗೊಳಿಸಿತ್ತು ಎನ್ನುವ ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಅಧಿಕಾರಿಗಳು ಅನೈತಿಕ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಕೊರೊನಾ ತಡೆಗಟ್ಟಲು ನೆರವಾಗಲಿ ಎಂದು ಚೀನಾದ ವಿದೇಶಾಂಗ ಇಲಾಖೆ ಖಾರವಾಗಿ ಪ್ರತಿಕ್ರಿಯಿಸಿದೆ.
Comments are closed.