ಉಡುಪಿ: ವಿಕಲಚೇತನರಿಗೆ ಅನುಕಂಪ ತೋರುವ ಬದಲು, ಅವರಿಗೆ ಉದ್ಯೋಗ ಮಾಡಲು ಅವಕಾಶಗಳನ್ನು ಸೃಷ್ಠಿಸಿ, ಆ ಮೂಲಕ ಅವರ ಸಾಮಥ್ರ್ಯವನ್ನು ಪ್ರದರ್ಶಿಸಲು ಅವಕಾಶಗಳನ್ನು ನೀಡಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಅವರು ಮಂಗಳವಾರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ , ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಕೌಶಲ್ಯಾಭಿವೃದ್ಧಿ, ಉದ್ದಿಮೆ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಉಡುಪಿ ಮತ್ತು ಯೂತ್ ಫಾರ್ ಜಾಬ್ಸ್ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ, ಅಂಗವಿಕಲತೆ, ಉದ್ಯೋಗ ಮತ್ತು ಪುನಃಶ್ಚೇತನ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರು ದೈಹಿಕವಾಗಿ ಅಸಮರ್ಥರಿರಬಹುದು ಆದರೆ ಅವರಲ್ಲಿ ಸಾಮಾನ್ಯ ಜನರಿಗಿಂತ ಹೆಚ್ಚಿನ ಆತ್ಮ ವಿಶ್ವಾಸವಿದ್ದು , ತಮಗೆ ನೀಡಿದ ಕೆಲಸದಲ್ಲಿ ಅತ್ಯಂತ ಪರಿಶ್ರಮದಿಂದ ದುಡಿಯಬಲ್ಲರು, ಜಿಲ್ಲೆಯ ವಿಕಲಚೇತನರಿಗೆ ಉದ್ಯೋಗ ಒದಗಿಸಿ, ಅವರು ಸ್ವಾಭಿಮಾನದ ಬದುಕು ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಹಾಯ ಮತ್ತು ಅಗತ್ಯ ಸಹಕಾರ ನೀಡಲಿದೆ , ಸಮಾಜ ಸಹ ವಿಕಲಚೇತನರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ವಿಕಲಚೇತನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ , 7 ತಾಲೂಕುಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ. ಉದ್ಯೋಗ ಮಾಡಲು ಅರ್ಹರಿರುವ 100 ಕ್ಕೂ ಅಧಿಕ ಮಂದಿಯನ್ನು ನೊಂದಾಯಿಸಲಾಗಿದ್ದು, ಜಿಲ್ಲೆಯ ಕೈಗಾರಿಕೋಧ್ಯಮಿಗಳು ತಮ್ಮ ಸಂಸ್ಥೆಯಲ್ಲಿ ಈ ವಿಕಲಚೇತನರ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಉದ್ಯೋಗ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಈ ವಿಕಲಚೇತನರಿಗೆ ಇತರೆ ಹೆಚ್ಚಿನ ಕೌಶಲ್ಯದ ಅಗತ್ಯವಿದ್ದಲ್ಲಿ, ವಿಕಲಚೇತನರಿಗೆ ಆ ಕೌಶಲ್ಯದ ತರಬೇತಿಯನ್ನೂ ಸಹ ಜಿಲ್ಲಾಡಳಿತ ಮೂಲಕ ನೀಡಲಾಗುವುದು ಎಂದು ತಿಳಿಸಿದರು.
ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ವಿಕಲಚೇತನರಿಗಾಗಿಯೇ ಪ್ರತ್ಯೇಕ ಉದ್ಯೋಗಮೇಳ ಆಯೋಜಿಸಲಾಗುವುದಾಗಿ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆ ನಡೆಸಿ, ಅವರ ಬೇಡಿಕೆಗನುಗುಣವಾಗಿ ಕೈಗಾರಿಕೆಗಳಲ್ಲಿ ವಿಕಲಚೇತನರು ಕಾರ್ಯನಿರ್ವಹಿಸಲು ಹೆಚ್ಚಿನ ಕೌಶಲ್ಯ ತರಬೇತಿಯ ಅಗತ್ಯವಿದ್ದಲ್ಲಿ , ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ ಮೂಲಕ ತರಬೇತಿ ನೀಡಿ, ಸಂಬಂದಪಟ್ಟ ಕೈಗಾರಿಗೆಗಳಲ್ಲಿ ಉದ್ಯೋಗ ನಿರ್ವಹಿಸಲು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಐ. ಆರ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಕಲಚೇತನರ ಸಬಲಿಕರಣ ಅಧಿಕಾರಿಚಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೃಷ್ಣ ರಾವ್ ಕೊಡಂಚ, ಯೂತ್ ಫಾರ್ ಜಾಬ್ಸ್ ಸಂಸ್ಥೆಯ ಮುಖ್ಯಸ್ಥೆ ಮೀರಾ ಶೆಣೈ, ಕೌಶಲ್ಯಾಭಿವೃದ್ಧಿ, ಉದ್ದಿಮೆ ಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಕೌಶಲ್ಯಾಭಿವೃದ್ಧಿ ಅಧಿಕಾರಿ ಭಾಸ್ಕರ್.ಎಅಮೀನ್, ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳು ಕಾರ್ಯಾಗಾರತದಲ್ಲಿ ಹಾಜರಿದ್ದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್ ಸ್ವಾಗತಿಸಿದರು. ರೂಪಲಕ್ಷ್ಮಿ ವಂದಿಸಿದರು, ಸುಬ್ರಮಣಿ ನಿರೂಪಿಸಿದರು.
Comments are closed.