ಉಡುಪಿ: ಮಾಹೆಯ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ಶುಕ್ರವಾರ ಸಂಪಿಗೆ ನಗರದ ಅಂಗನವಾಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮುದಾಯ ಆರೋಗ್ಯ ಶುಶ್ರೂಷಕ ವಿಭಾಗದ ಮುಖ್ಯಸ್ಥ ಡಾ. ಶಶಿಧರ ವೈ.ಎನ್, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಧ್ಯೇಯ ಸಮಾನತೆ ಬಗ್ಗೆ ಮಾತನಾಡಿ, ಲಿಂಗ ಬೇಧಭಾವ, ತಾರತಮ್ಯದ ನಿರ್ಮೂಲನೆಯನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಿಂದಲೇ ಆರಂಭಿಸಿದಾಗ ಸಮಾನತೆಯನ್ನು ಕಾಣಬಹುದು ಎಂದರು.


ಮಣಿಪಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ನೇತ್ರ, ಮಹಿಳೆಯರಲ್ಲಿ ಸಮಾನತೆ, ಸುರಕ್ಷತೆ ಹಾಗೂ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾತನಾಡಿ, ಮಹಿಳೆಯರು ಮರ್ಯಾದೆಗೆ ಅಂಜಿ ದೌರ್ಜನ್ಯವನ್ನು ಸಹಿಸಬಾರದು. ದೇಶದ ಕಾನೂನು ಮಹಿಳೆಯ ಸುರಕ್ಷತೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಟಾನಗೊಂಡಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಸಾರ್ವಜನಿಕರು ಠಾಣೆಯ ಮೆಟ್ಟಿಲೇರಲು ಹಿಂಜರಿಯಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಾವರ ಲಯನ್ಸ್ಕ್ಲಬ್ ಅಧ್ಯಕ್ಷ ಪ್ರತಾಪ್ ಕುಮಾರ್, ಅಂಗನವಾಡಿ ಶಿಕ್ಷಕಿ ನಮೃತಾ, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ನ ಸಹಾಯಕ ಪ್ರಾಧ್ಯಾಪಕಿ ಮಂಜುಳ ನಿರೂಪಿಸಿ, ವಂದಿಸಿದರು.
Comments are closed.