
ಅಂತಾರಾಷ್ಟ್ರೀಯ ಸೆಲೆಬ್ರಿಟಿಯೊಬ್ಬರನ್ನೇ ಅಪಹರಣ ಮಾಡಿ ಅತ್ಯಾಚಾರ ಮಾಡುತ್ತಾರೆ ಎಂದರೆ ಇನ್ನು ಸಾಮಾನ್ಯರ ಪಾಡೇನು? ಎಂದು ಆಲೋಚಿಸುವಂತಾಗಿದೆ. ಖ್ಯಾತ ಅಂತಾರಾಷ್ಟ್ರೀಯ ಗಾಯಕಿ ಡಫಿ ಕೆಲವು ವರ್ಷಗಳ ಕಾಲ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇಷ್ಟಕ್ಕು ಅವರು ಏನಾದರು ಅಂತ ಯಾರಿಗೂ ಗೊತ್ತಾಗಲಿಲ್ಲ. ಸುದೀರ್ಘ ಸಮಯದ ಬಳಿಕ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿ ತನಗೇನಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
“ನಾನು ಈ ಸಂಗತಿಯನ್ನು ನಿಮಗೆ ತಿಳಿಸಲು ಅದೆಷ್ಟು ಸಲ ಯೋಚಿಸಿದ್ದೇನೆ ಅಂತ ನೀವು ಊಹಿಸುವುದು ಕಷ್ಟ. ಆದರೆ ನಾನು ಇಷ್ಟು ಕಾಲ ಯಾಕೆ ದೂರವಾಗಿದ್ದೆ ಎಂದು ತಿಳಿಸಲು ಇದೇ ಸೂಕ್ತ ಸಮಯ. ಇಷ್ಟು ವರ್ಷಗಳ ಕಾಲ ನಾನು ಏನಾಗಿದ್ದೆ ಎಂಬುದು ನಿಮಗೆ ಗೊತ್ತಿಲ್ಲ. ಪತ್ರಕರೊಬ್ಬರು ಹುಡುಕಿಕೊಂಡು ಬಂದು ನನ್ನ ಸಂದರ್ಶನ ತೆಗೆದುಕೊಂಡರು. ಇಷ್ಟಕ್ಕೂ ಸತ್ಯ ಏನೆಂದರೆ… ನನ್ನನ್ನು ಕಿಡ್ನಾಪ್ ಮಾಡಿ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದರು. ಕೆಲವು ದಿನ ಅವರ ವಶದಲ್ಲೇ ಇಟ್ಟುಕೊಂಡಿದ್ದರು. ಆ ಬಳಿಕ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಈ ಘಟನೆಯಿಂದ ಚೇತರಿಸಿಕೊಳ್ಳಲು ಏಳು ವರ್ಷ ಹಿಡಿಸಿತು. ನಾನೀಗ ಚೆನ್ನಾಗಿಯೇ ಇದ್ದೇನೆ” ಎಂದಿದ್ದಾರೆ.
“ಇಷ್ಟು ದಿನಗಳ ಕಾಲ ಈ ಸಂಗತಿಯನ್ನು ನಾನು ನಿಮಗೆ ಯಾಕೆ ತಿಳಿಸಲಿಲ್ಲ ಎಂದರೆ… ನನ್ನ ಮನಸ್ಸಿನ ನೋವು ಈ ಜಗತ್ತಿಗೆ ಗೊತ್ತಾಗಬಾರದು ಅಂತ. ನನ್ನ ಹೃದಯವೇ ಛಿದ್ರವಾದ ಮೇಲೆ ನಾನು ಮನಸಾರೆ ಹಾಡಲು ಹೇಗೆ ಸಾಧ್ಯ? ಎಂದುಕೊಳ್ಳುತ್ತಿದ್ದೆ. ಈಗಷ್ಟೇ ನನ್ನ ಮನಸ್ಸು ಚೇತರಿಸಿಕೊಂಡಿದೆ. ಶೀಘ್ರದಲ್ಲೇ ನನ್ನ ಸಂದರ್ಶನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇಷ್ಟು ವರ್ಷಗಳ ಕಾಲ ನನ್ನ ಬಗ್ಗೆ ಆಲೋಚಿಸಿದ್ದಕ್ಕೆ ಧನ್ಯವಾದಗಳು. ದಯವಿಟ್ಟು ನನ್ನ ಕುಟುಂಬವನ್ನು ಈ ವಿಚಾರದಲ್ಲಿ ಎಳೆಯಬೇಡಿ. ಈ ಸಂಗತಿಯನ್ನು ಪಾಸಿಟೀವ್ ಆಗಿ ಸ್ವೀಕರಿಸಿ ನನ್ನನ್ನು ಬೆಂಬಲಿಸಿ” ಎಂದಿದ್ದಾರೆ.
Comments are closed.