ರಾಷ್ಟ್ರೀಯ

ಪ್ರಿಯತಮೆಗೆ ಬದಲ್ಲು ಅಮ್ಮನಿಗೆ ಶೂಟ್ ಮಾಡಿ ಸೈನಿಕ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಸೇನೆಯಿಂದ ವಜಾಗೊಳಿಸಿದ್ದಕ್ಕೆ ಪ್ರಿಯತಮೆಗೆ ಗುಂಡು ಹಾರಿಸುವ ಬದಲು ಆಕೆಯ ತಾಯಿಗೆ ಮಾಜಿ ಸೇನಾ ಸರ್ವಿಸ್‌ಮೆನ್ ಗುಂಡು ಹಾರಿಸಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಬಾಲಾಜಿ ಆತ್ಮಹತ್ಯೆ ಮಾಡಿಕೊಂಡ ಸೈನಿಕ. ತಡೆಪಲ್ಲಿ ಮಂಡಲ್ ಬಳಿಯ ಕೋಲನುಕೊಂಡ ಬಳಿ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಾಜಿ ಪ್ರಿಯತಮೆಯ ಮನೆಗೆ ಹೋಗಿ ಆಕೆಯ ತಾಯಿಗೆ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ.

ಏನಿದು ಪ್ರಕರಣ?
ಆರೋಪಿ ಬಾಲಾಜಿ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದನು. ನಂತರ ಯುವತಿ ಬಾಲಾಜಿಯನ್ನು ಮದುವೆಯಾಗೋಣ ಎಂದು ಕೇಳಲು ಶುರು ಮಾಡಿದ್ದಳು. ಆಗ ಆರೋಪಿ ಬಾಲಾಜಿ ಯುವತಿಯನ್ನು ದೂರ ಮಾಡಲು ಶುರು ಮಾಡಿದ್ದಾನೆ. ಹೀಗಾಗಿ ಯುವತಿ ಮತ್ತು ಆಕೆಯ ತಾಯಿ 2019ರ ಡಿಸೆಂಬರ್‍ನಲ್ಲಿ ಬಾಪಟ್ಲಾ ಟೌನ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದರು. ಆಗ ಆತನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಾಜಿ ಸೇನೆಯ ಕೆಲಸ ಕಳೆದುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕೋಪಗೊಂಡ ಬಾಲಾಜಿ ಪ್ರಿಯತಮೆಯ ಮನೆಗೆ ಹೋಗಿ ಆಕೆಗೆ ಗುಂಡು ಹಾರಿಸಲು ಪ್ಲಾನ್ ಮಾಡಿಕೊಂಡಿದ್ದನು. ಆದರೆ ಮನೆಯ ಬಾಗಿಲನ್ನು ಪ್ರಿಯತಮೆಯ ತಾಯಿ ರಮಾದೇವಿ ಓಪನ್ ಮಾಡಿದ್ದಾರೆ. ತಕ್ಷಣ ರಿವಾಲ್ವರ್ ನೋಡಿ ಓಡಿ ಹೋಗಿದ್ದಾರೆ. ಆದರೂ ಬಾಲಾಜಿ ಗುಂಡು ಹಾರಿಸಿದ್ದು, ಅದು ರಮಾದೇವಿಯ ಬಲ ಕಿವಿಯ ಮೂಲಕ ಹೋಗಿದೆ. ಇದರಿಂದ ರಮಾದೇವಿಗೆ ಯಾವುದೇ ಅಪಾಯವಾಗಿಲ್ಲ.

ರಮಾದೇವಿಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬಾಲಾಜಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಬಾಲಾಜಿ ಬ್ಯಾಗ್ ಮತ್ತು ರಿವಾಲ್ವರ್ ಎಸೆದು ಅವನು ಬಂದಿದ್ದ ಸ್ನೇಹಿತನ ಆಟೋದಲ್ಲಿ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಾಜಿಯನ್ನು ಹುಡುಕಾಡುತ್ತಿದ್ದರು. ಆದರೆ ರೈಲ್ವೆ ಹಳಿಯಲ್ಲಿ ಬಾಲಾಜಿಯ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಬಂಧನದ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಬಾಲಾಜಿಯ ಪೋಷಕರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದರು. ವಿಚಾರ ತಿಳಿದು ಪೋಷಕರು ಬಂದು ತಮ್ಮ ಮಗನದೇಹ ಎಂದು ದೃಢಪಡಿಸಿದ್ದರು. ಇದೀಗ ಬಾಲಾಜಿಗೆ ಸಹಾಯ ಮಾಡಿದ್ದ ಆಟೋರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.