
ಬೀಜಿಂಗ್/ನವದೆಹಲಿ: ಚೀನಾವನ್ನು ಇನ್ನಿಲ್ಲದಂತೆ ಹೈರಾಣಗೊಳಿಸಿರುವ ಕೊರೊನಾ ವೈರಸ್ ಹಲವಾರು ದೇಶಗಳಿಗೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಈಗ ದಕ್ಷಿಣ ಕೊರಿಯಾ, ಇರಾನ್, ಇಟಲಿ ಮತ್ತಿತರ ದೇಶಗಳಲ್ಲಿ ಭೀತಿ ಹುಟ್ಟಿಸಿದೆ.
ದ.ಕೊರಿಯಾದಲ್ಲಿ ಶನಿವಾರ ಮತ್ತೆ 142 ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 346ಕ್ಕೇರಿದೆ.
ಈಗಾಗಲೇ ಇಲ್ಲಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಐದು ದಿನಗಳ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಸೋಂಕಿತರ ಪೈಕಿ 92 ಮಂದಿ ಚೆಯಾಂಗ್‌ಡೋ ಡೇನಮ್ ಮಾನಸಿಕ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ಎಂದು ಹೇಳಲಾಗಿದೆ. ಇದೇ ವೇಳೆ, ಇಲ್ಲಿನ ಚರ್ಚ್‌ವೊಂದರ 150 ಸದಸ್ಯರಿಗೂ ಸೋಂಕು ತಗುಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಟಲಿ ನಗರ ಲಾಕ್‌ಡೌನ್:
ಇಟಲಿಯಲ್ಲೂ ಕೊರೊನಾ ಆತಂಕ ಹೆಚ್ಚಿದ್ದು, ವೈರಸ್‌ಗೆ ಇಲ್ಲಿ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಕೊಡೊಗ್ನೊà ನಗರವನ್ನು ಲಾಕ್‌ಡೌನ್ ಮಾಡಲಾಗಿದ್ದು, ಯಾರೂ ಮನೆಗಳಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು, ಇರಾನ್‌ನಲ್ಲಿ 28 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಐವರು ಸಾವಿಗೀಡಾಗಿದ್ದಾರೆ. ಒಟ್ಟಾರೆ ಜಾಗತಿಕವಾಗಿ 77 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಚೀನಾ ಘೋಷಿಸಿದೆ.
ಚೀನಾದಲ್ಲಿ ಮೃತರ ಸಂಖ್ಯೆ ಶನಿವಾರ 2,345ಕ್ಕೇರಿದ್ದು, ಸೋಂಕಿತರ ಸಂಖ್ಯೆ 76,288ಕ್ಕೇರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವೊಂದು ವುಹಾನ್‌ಗೆ ಆಗಮಿಸಿದ್ದು, ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ.
ಅನಗತ್ಯ ಪ್ರಯಾಣ ಬೇಡ:
ಕೊರೊನಾವೈರಸ್ ಭೀತಿಯಿಂದಾಗಿ ಕೇಂದ್ರ ಸರ್ಕಾರವು ದೇಶದ ನಾಗರಿಕರಿಗೆ ಹೊಸ ಪ್ರಯಾಣ ಸಲಹೆಯನ್ನು ಹೊರಡಿಸಿದ್ದು, ಸಿಂಗಾಪುರಕ್ಕೆ ಅನಗತ್ಯವಾಗಿ ಭೇಟಿ ನೀಡದಂತೆ ಸೂಚಿಸಿದೆ. ಶನಿವಾರ ಕೇಂದ್ರ ಸಂಪುಟ ಕಾರ್ಯದರ್ಶಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಅಲ್ಲದೆ, ಇನ್ನು ಮುಂದೆ ನೇಪಾಳ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಆಗಮಿಸುವ ವಿಮಾನಗಳ ಪ್ರಯಾಣಿಕರನ್ನೂ ಏರ್‌ಪೋರ್ಟ್‌ನಲ್ಲಿ ತಪಾಸಣೆಗೊಳಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಧಾನಿ ಮೋದಿಗೆ ಪತ್ರ
ಕೊರೊನಾ ಸೋಂಕಿತರಿರುವ ಜಪಾನ್‌ನ ನೌಕೆಯಲ್ಲಿ ಸಿಲುಕಿಕೊಂಡಿರುವ ತಮ್ಮ 24 ವರ್ಷದ ಮಗಳನ್ನು ರಕ್ಷಿಸುವಂತೆ ಕೋರಿ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. “ನನ್ನ ಮಗಳ ರಕ್ತದ ಪರೀಕ್ಷೆಯಲ್ಲಿ ನೆಗೆಟಿವ್ ಎಂಬ ವರದಿ ಬಂದಿದೆ. ಕಳೆದ 15 ದಿನಗಳಿಂದಲೂ ಅವಳನ್ನು ಸಣ್ಣ ಕೊಠಡಿಯೊಂದರಲ್ಲಿ ನಿಗಾದಲ್ಲಿ ಇರಿಸಿದ್ದಾರೆ. ಅವಳನ್ನು ದಯವಿಟ್ಟು ರಕ್ಷಿಸಿ’ ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ. ಈ ವ್ಯಕ್ತಿಯ ಪುತ್ರಿಯು ಕ್ರೂಸ್‌ನೌಕೆಯ ಭದ್ರತಾ ದಳದ ಸದಸ್ಯೆ.
Comments are closed.