ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ 2020ರ ಸಾಲಿನ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಬಜ್ಜೊಡಿಯ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಸಭಾಂಗಣದಲ್ಲಿ ಜರಗಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಾಹಿತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅಭಿ ವ್ಯಕ್ತಿಯ ಜವಾಬ್ದಾರಿಯಾಗಬೇಕೇ ಹೊರತು ಸ್ವೇಚ್ಛಾಚಾರವಾಗಬಾರದು.ಸತ್ಯವನ್ನು ತಿಳಿಸೋಣ ಧರ್ಮ, ಜಾತಿಗಳ ನಡುವಿನ ಜಗಳದಿಂದಾಗಿ ನಾವು ಮನುಷ್ಯರು ಎನ್ನುವುದನ್ನೇ ಮರೆತುಬಿಟ್ಟಿದ್ದೇವೆ. ಇಂತಹ ಸಂದರ್ಭದಲ್ಲಿ ಧರ್ಮ, ಜಾತೀಯ ಸಾಹಿತ್ಯ ಬರೆಯುತ್ತಾ ಕುಳಿತರೆ ಆತ ಮತೀಯ ಸಾಹಿತಿಯಾ ಗುತ್ತಾನೆಯೇ ಹೊರತು ನೈಜ ಸಾಹಿತಿ ಯಾಗಲಾರ. ಸುಳ್ಳುಗಳನ್ನು ನಿಗ್ರಹಿಸಿ ಸತ್ಯವನ್ನು ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ನಿಜವಾದ ಸಾಹಿತಿ ಮಾಡಬೇಕು ಎಂದು ಅವರು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂದೇಶ ಪ್ರಶಸ್ತಿ ಪ್ರದಾನ :
ಬೊಳುವಾರು ಮೊಹಮ್ಮದ್ ಕುಂಞಿ (ಕನ್ನಡ ಸಾಹಿತ್ಯ), ವಲ್ಲಿ ವಗ್ಗ/ವಲೇರಿಯನ್ ಡಿ’ಸೋಜಾ (ಕೊಂಕಣಿ ಸಾಹಿತ್ಯ), ಶಿವಕುಮಾರ್ (ಪತ್ರಿಕೋ ದ್ಯಮ), ಹೆಲೆನ್ ಡಿಕ್ರುಜ್ (ಕೊಂಕಣಿ ಸಂಗೀತ), ನೃತ್ಯಗುರು ಡಾ| ಕೆ.ಎಸ್. ಪವಿತ್ರಾ (ಕಲೆ), ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜುಸ್ತಿನ್ ಡಿ’ಸೋಜಾ (ಶಿಕ್ಷಣ), ಅಂ.ರಾ. ಪವರ್ ಲಿಫ್ಟರ್ ವಿನ್ಸೆಂಟ್ ಪ್ರಕಾಶ ಕಾರ್ಲೋ (ವಿಶೇಷ ಸಾಧಕ) ಅವರಿಗೆ ಸಂದೇಶ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 25 ಸಾವಿರ ರೂ. ನಗದು, ಟ್ರೋಫಿ, ಪ್ರಶಸ್ತಿ ಪತ್ರ ಒಳಗೊಂಡಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ಬಿಷಪ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅವರು ವಹಿಸಿದ್ದರು. ಸಂಗೀತ ನಿರ್ದೇಶಕ ಕ್ಯಾಜಿಟನ್ ಡಾಯಸ್ ಗೌರವ ಅತಿಥಿಯಾಗಿದ್ದರು.ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ| ನಾ. ಡಿ’ಸೋಜಾ, ಸಂದೇಶ ಪ್ರತಿಷ್ಠಾನದ ವಿಶ್ವಸ್ತ ರೋಯ್ ಕ್ಯಾಸ್ತಲಿನೋ ಉಪಸ್ಥಿತರಿದ್ದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ರಾದ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಅವರು ಸ್ವಾಗತಿಸಿದರು.


Comments are closed.