ಉಡುಪಿ: ಕಳೆದ ವರ್ಷ ಕೋತ ಸಮೀಪದ ಮಣೂರಿನಲ್ಲಿ ನಡೆದ ಭರತ್ ಮತ್ತು ಆತನ ಸ್ನೇಹಿತ ಯತೀಶ್ ಕೊಲೆ ಪ್ರಕರಣದಲ್ಲಿ ಕೊಲೆಯ ಸಂಚು ರೂಪಿಸಿದ ಆರೋಪ ಹೊತ್ತಿರುವ ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಜಾಮೀನು ಸರ್ವೋಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿದ್ದು ಯಾವುದೋ ಒತ್ತಡದಿಂದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಆತನನ್ನು ಮೂರು ದಿನಗಳಲ್ಲಿ ಬಂಧಿಸದೇ ಹೋದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಮೃತ ಭರತ್ ಸಹೋದರ ಹೇಮಂತ್ ಹೇಳಿದರು.

ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷ ಜನವರಿ 26ರಂದು ರಾತ್ರಿ ಸುಮಾರು 10.30ರ ಸುಮಾರಿಗೆ ಭರತ್ ಮತ್ತು ಆತನ ಸ್ನೇಹಿತ ಯತೀಶನನ್ನು ಟಾಯ್ಲೆಟ್ ಪಿಟ್ ವಿಚಾರದಲ್ಲಿ ಕೊಲೆ ಮಾಡಲಾಗಿತ್ತು. ಅಂದಿನ ಪೊಲೀಸ್ ವರಿಷ್ಠಾಧಿಕಾರಿಯವರಾದ ಲಕ್ಷ್ಮಣ್ ನಿಂಬರ್ಗಿಯವರು ಇದರಲ್ಲಿ ಭಾಗಿಯಾದ 18 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೆಲವು ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯನಾದ ರಾಘವೇಂದ್ರ ಕಾಂಚನ್ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದು, ಈ ಬಗ್ಗೆ ಭರತ್ ತಾಯಿ ಪಾರ್ವತಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

(ರಾಘವೇಂದ್ರ ಕಾಂಚನ್ )
ಸಾಲ ಮಾಡಿ ಕೋರ್ಟ್ ಮೆಟ್ಟಿಲೇರಿದೆ….
ವಿವಿಧ ಸಂಘದಲ್ಲಿ ಸಾಲ ಮಾಡಿ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕೆಂಬುದು ನನ್ನ ಹೋರಾಟ. ನನ್ನ ಮಗ ಮತ್ತು ಆತನ ಸ್ನೇಹಿತನ ಕೊಂದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಸುಪ್ರೀಂ ಕೋರ್ಟಿನಲ್ಲಿ ಜಾಮೀನು ವಜಾಗೊಳಿಸಿ ಹತ್ತು ದಿನದ ಮೇಲೆ ಆಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ರಾಜಕಾರಣಿಗಳು ಈ ಬಗ್ಗೆ ಒತ್ತಡ ತಂದಿರುವ ಬಗ್ಗೆ ಗುಮಾನಿ ಇದ್ದು, ಇನ್ನು 3 ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದಲ್ಲಿ ಫೆಬ್ರವರಿ 7ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಭರತನ ತಾಯಿ ಪಾರ್ವತಿಯವರು ಎಚ್ಚರಿಸಿದರು.

(ಭರತ್ , ಯತೀಶ್)
ಒಂದು ವೇಳೆ ಆರೋಪಿಯನ್ನು ಬಂಧಿಸದಿದ್ದಲ್ಲಿ ಪೊಲೀಸ್ ಇಲಾಖೆಯ ಮೇಲೆ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲು ಮಾಡಲು ತೀರ್ಮಾನಿಸಿದ್ದೇವೆಂದು ಕುಟುಂಬಿಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭರತ್ ತಾಯಿ ಪಾರ್ವತಿ, ಯತೀಶ್ ಸಹೋದರ ಮನೋಜ್, ಕುಟುಂಬಿಕರಾದ ಅಣ್ಣಪ್ಪ, ಮಾಲಿನಿ ಉಪಸ್ಥಿತರಿದ್ದರು.
Comments are closed.